ADVERTISEMENT

ಶಾಸಕರ ಕೊಲೆಗೆ ಸಂಚು: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಬೆಂಗಳೂರು: ಮಾಜಿ ಶಾಸಕ ಬಿಜೆಪಿಯ ಎಲ್.   ಆರ್. ಶಿವರಾಮೇಗೌಡ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಭೂಗತ ಪಾತಕಿ ರವಿ ಪೂಜಾರಿಯ ಐವರು ಸಹಚರರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿಯ ಹರೀಶ್ ಅಲಿಯಾಸ್ ಕೊಕೇನ್ ಹರೀಶ್ (39), ಜಯನಗರ ಎಲ್‌ಐಸಿ ಕಾಲೊನಿಯ ರಾಧಾಕೃಷ್ಣ ಶೆಣೈ (32), ಹೊಂಗಸಂದ್ರದ ರಮೇಶ (32), ಕನಕಪುರ ಮುಖ್ಯರಸ್ತೆ ಸಮೀಪದ ರಘುವನಹಳ್ಳಿಯ ಕೆ.ಎಸ್.ಭಟ್ (42) ಮತ್ತು ಮಂಗಳೂರಿನ ಸುನಿಲ್ ಬಂಗೇರಾ (32) ಬಂಧಿತರು.

`ಆರೋಪಿಗಳು ಕೆಂಗೇರಿ ಉಪನಗರ ರಸ್ತೆಯ ಬಳಿ ಗುರುವಾರ (ಜ.2) ರಾತ್ರಿ ಉದ್ಯಮಿಯೊಬ್ಬರನ್ನು ಕೊಲೆ ಮಾಡಿ ಹಣ ಮತ್ತು ಚಿನ್ನಾಭರಣ ದೋಚಲು ಹೊಂಚು ಹಾಕುತ್ತಿದ್ದಾರೆ ಎಂದು ಮಾಹಿತಿ ಬಂತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮಾಜಿ ಶಾಸಕ ಶಿವರಾಮೇಗೌಡ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಹೇಳಿಕೆ ನೀಡಿದರು~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ವಿದೇಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಮತ್ತು ಆತನ ಬಲಗೈ ಬಂಟ ಕಳಿ ಯೋಗೀಶ್ ಜತೆ ಆರೋಪಿಗಳು ಸಂಪರ್ಕ ಇಟ್ಟುಕೊಂಡಿದ್ದರು. ಆರೋಪಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಮೊಬೈಲ್ ಸಂಖ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ನಂತರ ಆ ಮಾಹಿತಿಯನ್ನು ಕಳಿ ಯೋಗೀಶ್ ಮೂಲಕ ರವಿ ಪೂಜಾರಿಗೆ ತಲುಪಿಸುತ್ತಿದ್ದರು. ರವಿ ಪೂಜಾರಿ ಆ ಉದ್ಯಮಿಗಳಿಗೆ ಕರೆ ಮಾಡಿ ಹಫ್ತಾ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕುಖ್ಯಾತ ದರೋಡೆಕೋರ ಮಣೀಶ್‌ಶೆಟ್ಟಿ, ತಕರಾರು ಇರುವ ಜಮೀನುಗಳ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ. ಅಲ್ಲದೇ ಆ ಜಮೀನುಗಳನ್ನು ಆತನ ಪರವಾಗಿರುವ ವ್ಯಕ್ತಿಗಳಿಗೆ ಮಾರಾಟ ಮಾಡಿಸುವಂತೆ ಸೂಚಿಸುತ್ತಿದ್ದ. ಆರೋಪಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರವಿ ಪೂಜಾರಿಯಿಂದ ಬೆದರಿಕೆ ಹಾಕಿಸಿ ಆ ಜಮೀನುಗಳನ್ನು ಮಾರಾಟ ಮಾಡಿಸುತ್ತಿದ್ದರು. ಅಂತೆಯೇ ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ಶಿವರಾಮೇಗೌಡ ಅವರನ್ನು ಕೊಲೆ ಮಾಡುವಂತೆ ಮಣೀಶ್‌ಶೆಟ್ಟಿ ಆರೋಪಿಗಳಿಗೆ ಸೂಚಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದರು.

ಅವರಿಗೆ ಕಳಿ ಯೋಗೀಶ್ ಹಣಕಾಸು ನೆರವು ನೀಡುತ್ತಿದ್ದ. ಬಂಧಿತರಿಂದ ಎರಡು ಕಾರು, ಐದು ಮೊಬೈಲ್ ಫೋನ್‌ಗಳು, ಮಾರಕಾಸ್ತ್ರಗಳು ಹಾಗೂ ಜಮೀನುಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಹಲವು ಉದ್ಯಮಿಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಎಸ್.ಭಟ್ ಮತ್ತು ಶೆಣೈ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಅಪಹರಣ, ಕೊಲೆ ಯತ್ನ ಹಾಗೂ ದರೋಡೆ ಯತ್ನ ಪ್ರಕರಣಗಳು ದಾಖಲಾಗಿವೆ. ಹರೀಶ್ ವಿರುದ್ಧ ಮಡಿಕೇರಿ, ಮಂಗಳೂರು, ಹಾಸನ, ಬೆಂಗಳೂರಿನ ಠಾಣೆಗಳಲ್ಲಿ ಅಪಹರಣ, ಕೊಲೆ ಯತ್ನ, ಮಾದಕ ವಸ್ತು ಸಾಗಣೆಗೆ ಸಂಬಂಧಿಸಿದಂತೆ 13 ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಕೆ.ಸಿ.ಅಶೋಕನ್, ಬಾಲರಾಜ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.