ಬೆಂಗಳೂರು: ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತಮ್ಮ ಅಧಿಕೃತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ದೃಢಪಟ್ಟಿದೆ. ಈ ಕುರಿತ ತನಿಖೆಯ ಅಂತಿಮ ವರದಿಯನ್ನು ಲೋಕಾಯುಕ್ತ ಪೊಲೀಸರು ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ವಿಶ್ವನಾಥ್ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಅಲ್ಲಾಳಸಂದ್ರ ನಿವಾಸಿ ವಿ.ಶಶಿಧರ್ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 2011ರ ನವೆಂಬರ್ 26ರಂದು ಅಂಚೆ ಮೂಲಕ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಡಿಸೆಂಬರ್ 7ರಂದು ದೂರುದಾರರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಕರೆಸಿಕೊಂಡಿದ್ದ ನ್ಯಾಯಾಧೀಶರು, ಪ್ರಮಾಣಿತ ಹೇಳಿಕೆ ದಾಖಲಿಸಿಕೊಂಡಿದ್ದರು.
ದೂರನ್ನು ನವೆಂಬರ್ 9ರಂದು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.
ನ್ಯಾಯಾಲಯದ ಆದೇಶದಂತೆ ವಿಶ್ವನಾಥ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದರು. ವಿಶ್ವನಾಥ್ ಮತ್ತು ಅವರ ನಿಕಟವರ್ತಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದರು. ತನಿಖೆಯ ವೇಳೆ ಪತ್ತೆಯಾದ ಆಸ್ತಿಗಳ ಖರೀದಿ ಮತ್ತು ಅದಕ್ಕೆ ಮೂಲವಾದ ಆದಾಯ ಕುರಿತು ವಿವರಣೆ ನೀಡುವಂತೆ ಶಾಸಕರಿಗೆ ಸೂಚನೆ ನೀಡಿದ್ದರು. ಆದರೆ, ಈವರೆಗೂ ಶಾಸಕರು ವಿವರಣಾ ಹೇಳಿಕೆ ಸಲ್ಲಿಸಿಲ್ಲ. ಅದರ ಹೊರತಾಗಿಯೇ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ.
ಒಂದೂವರೆ ಪಟ್ಟು ಅಕ್ರಮ ಆಸ್ತಿ?: ಉನ್ನತ ಮೂಲಗಳ ಪ್ರಕಾರ, ವಿಶ್ವನಾಥ್ ತಮ್ಮ ಅಧಿಕೃತ ಆದಾಯಕ್ಕಿಂತ ಶೇಕಡ 150ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಲೋಕಾಯುಕ್ತ ತನಿಖೆಯಲ್ಲಿ ಖಚಿತವಾಗಿದೆ. ಶಾಸಕರು ಮತ್ತು ಬೇನಾಮಿಗಳ ಹೆಸರಿನಲ್ಲಿರುವ ಸುಮಾರು 100ಕ್ಕೂ ಹೆಚ್ಚು ಆಸ್ತಿಗಳ ಪಟ್ಟಿಯನ್ನೂ ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ಸಲ್ಲಿಸಲಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್‌ಪಿ ಎಸ್.ಗಿರೀಶ್ ಮತ್ತು ತಂಡ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ. ಸುಮಾರು 400ಕ್ಕೂ ಹೆಚ್ಚು ಪುಟಗಳ ಅಂತಿಮ ವರದಿ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಕೆ ಆಗಲಿದೆ. ಅದರೊಂದಿಗೆ 5,000 ಪುಟಗಳಷ್ಟು ದಾಖಲೆಗಳನ್ನೂ ಸಲ್ಲಿಸಲು ತನಿಖಾ ತಂಡ ಒದಗಿಸಲಿದೆ ಎಂದು ತಿಳಿದುಬಂದಿದೆ.
`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ಯ ಕಲಂ 13(1)(ಡಿ), 13(1)(ಇ)- (ಅಕ್ರಮ ಆಸ್ತಿ ಸಂಪಾದನೆ) ಮತ್ತು ಭಾರತೀಯ ದಂಡ ಸಂಹಿತೆಯ ಕಲಂ 177 (ಸುಳ್ಳು ಮಾಹಿತಿ ನೀಡಿ ವಂಚಿಸುವುದು) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸುವುದಾಗಿ ತನಿಖಾ ತಂಡ ಕೋರ್ಟ್‌ಗೆ ಶನಿವಾರ ತಿಳಿಸುವ ಸಾಧ್ಯತೆ ಇದೆ. ವಿಶ್ವನಾಥ್ ಶಾಸಕರಾಗಿರುವ ಕಾರಣದಿಂದ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ವಿಧಾನಸಭೆಯ ಸ್ಪೀಕರ್ ಅನುಮತಿ ಅಗತ್ಯ. ಸ್ಪೀಕರ್ ಅವರಿಂದ ಅನುಮತಿ ಪಡೆಯಬೇಕು. ಅನುಮತಿ ದೊರೆತ ಬಳಿಕ ಆರೋಪಪಟ್ಟಿ ಸಲ್ಲಿಸುವುದಾಗಿ ತನಿಖಾ ತಂಡ ಕೋರ್ಟ್‌ಗೆ ತಿಳಿಸಲಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.