ADVERTISEMENT

ಶಾಸ್ತ್ರಿಯವರ ಸಂಶೋಧನೆ ನಿರಂತರವಾಗಲಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಬೆಂಗಳೂರು: 60 ವರ್ಷ ಪೂರೈಸಿದ ವಿದ್ವಾಂಸ, ಸಂಶೋಧಕ ಡಾ.ಆರ್. ಶೇಷಶಾಸ್ತ್ರಿ ಅವರನ್ನು ನಗರದಲ್ಲಿ ಶನಿವಾರ ಆತ್ಮೀಯವಾಗಿ ಅಭಿನಂದಿಸಲಾಯಿತು.

ಕನ್ನಡ ಗೆಳೆಯರ ಬಳಗವು ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಶಾಸ್ತ್ರಿ- ಸಂಜೀವರತ್ನಾ ದಂಪತಿಯನ್ನು ಸನ್ಮಾನಿಸಿದರು.

ಸನ್ಮಾನಕ್ಕೂ ಮುನ್ನ ಪುಟ್ಟ ಸಂವಾದ ನಡೆಸಿಕೊಟ್ಟ ಡಾ.ಆರ್. ಶೇಷಶಾಸ್ತ್ರಿ, `ನನ್ನ  ಜೀವನದಲ್ಲಿ ಯಾವುದೇ ವಿಚಾರದ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಂಡವನಲ್ಲ. 60 ವರ್ಷಗಳನ್ನು ಹುಡುಗಾಟದಲ್ಲಿಯೇ ಕಳೆದೆ. ಇನ್ನೂ 40 ವರ್ಷ ಬದುಕಿರುತ್ತೇನೆಂಬ ವಿಶ್ವಾಸ ನನ್ನದು ಎಂದರು.

ಸನ್ಮಾನ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ `ಶೇಷಶಾಸ್ತ್ರಿ: ಬದುಕು-ಬರಹ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ, ಶೇಷಶಾಸ್ತ್ರಿ ಅವರ ಗುಣಗಾನ ಮಾಡಿದರು.

`ಶೇಷಶಾಸ್ತ್ರಿ ಬದುಕು, ಶಾಸನ ಸಾಹಿತ್ಯ~ದ ಬಗ್ಗೆ ಮಾತನಾಡಿದ ಡಾ. ದೇವರಕೊಂಡಾರೆಡ್ಡಿ, `ಆಂಧ್ರದ ಅನಂತಪುರಂನ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದರ ಜತೆ ಜತೆಗೆ, ಶಾಸನಗಳು ಹಾಗೂ ವೀರಗಲ್ಲುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಕನ್ನಡ ಹಾಗೂ ತೆಲುಗಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ~ ಎಂದರು.

`ಶಾಸನೇತರ ಸಾಹಿತ್ಯ~ದ ಬಗ್ಗೆ  ಡಾ.ಕೆ.ಆರ್. ಗಣೇಶ್ ಮಾತನಾಡಿದರು.  ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್, `ಶೇಷಶಾಸ್ತ್ರಿ ಅವರಿಗೆ ಇನ್ನು ಮುಂದೆಯೂ ಸಂಶೋಧನೆ ಹಾಗೂ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ~ ಎಂದರು.

ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಡಾ.ಆರ್. ಶೇಷಶಾಸ್ತ್ರಿ ದಂಪತಿಯನ್ನು ಸನ್ಮಾನಿಸಿದರು. ಶಾಸ್ತ್ರಿ ಅವರಿಗೆ ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಡಾ.ಎಚ್.ಎಸ್. ಗೋಪಾಲರಾವ್ ಅಭಿನಂದನಾ ಭಾಷಣ ಮಾಡಿದರು. ಡಾ. ಜ್ಯೋತ್ಸ್ನಾ ಕಾಮತ್ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಥೆಗಾರ ಕೆ.ಎನ್. ಭಗವಾನ್ ಅವರ `ನಾಲ್ಕು ದಶಕದ ಕಥೆಗಳು~ ಎಂಬ ಪುಸ್ತಕವನ್ನು ಡಾ. ಜ್ಯೋತ್ಸ್ನಾ ಕಾಮತ್ ಬಿಡುಗಡೆ ಮಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.