ADVERTISEMENT

ಶಿವಾಜಿನಗರ ಪಾದಾಚಾರಿ ಮಾರ್ಗ: ಮತ್ತೆ ಒತ್ತುವರಿ ಆಗದಂತೆ ಆದೇಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 20:20 IST
Last Updated 12 ಫೆಬ್ರುವರಿ 2011, 20:20 IST

ಬೆಂಗಳೂರು: ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, ಮತ್ತೆ ಒತ್ತುವರಿ ಆಗದಂತೆ ನಿಗಾ ಇಡಲು ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಪಾದಚಾರಿ ಮಾರ್ಗಗಳ ಒತ್ತುವರಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಶಿವಾಜಿನಗರದ ಬಿ.ಎಸ್.ಮುನೀರ್ ಅಹ್ಮದ್, ಜುಮ್ಮಾ ಮಸೀದಿ ರಸ್ತೆ, ತಾಜ್ ಹೋಟೆಲ್ ವೃತ್ತ, ಎಚ್‌ಕೆಪಿ ರಸ್ತೆ, ಬ್ರಾಡ್‌ವೇ ರಸ್ತೆ ಮತ್ತಿತರ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸುವಂತೆ ಕೋರಿ 2009ರ ಮೇ 6 ಮತ್ತು 2010ರ ಸೆಪ್ಟೆಂಬರ್ 25ರಂದು ಮನವಿ ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿತು. ಆಗ ನ್ಯಾಯಾಲಯಕ್ಕೆ ಹಾಜರಾಗಿದ್ದ ಶಿವಾಜಿನಗರ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಮೊಹಮ್ಮದ್ ಹುಸೇನ್, ಎಲ್ಲ ಪಾದಚಾರಿ ಮಾರ್ಗಗಳಿಂದ ಬೀದಿ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ. ಈಗ ಈ ಮಾರ್ಗಗಳು ಒತ್ತುವರಿ ಮುಕ್ತವಾಗಿವೆ ಎಂದು ತಿಳಿಸಿದರು.

ADVERTISEMENT

ಪೊಲೀಸ್ ಇನ್‌ಸ್ಪೆಕ್ಟರ್ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿದ ವಿಭಾಗೀಯ ಪೀಠ, ಮತ್ತೆ ಪಾದಚಾರಿ ಮಾರ್ಗದ ಒತ್ತುವರಿ ಆಗದಂತೆ ನಿಗಾ ಇಡಬೇಕು ಎಂದು ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.