ADVERTISEMENT

ಶುದ್ಧ ಕನ್ನಡಕ್ಕೊಂದು ರಾಜ ಮಾರ್ಗ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ಬೆಂಗಳೂರು: `ಕರ್ನಾಟಕದ ಹಲವು ಕನ್ನಡಗಳ ನಡುವೆ ಒಂದು ಒಪ್ಪಿತ ಕನ್ನಡವನ್ನು ರೂಪಿಸಿದ ಕೀರ್ತಿ ಡಾ.ರಾಜ್‌ಕುಮಾರ್ ಅವರದ್ದು~ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಹೇಳಿದರು.

ನಗರದಲ್ಲಿ ಮಂಗಳವಾರ ವಾರ್ತಾ ಇಲಾಖೆ ಆಯೋಜಿಸಿದ್ದ ರಾಜ್ ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಕನ್ನಡದ ಮೊದಲ ಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿ ನಾಡಿನ ಹಲವು ಕನ್ನಡಗಳಿಂದ ಹೊಮ್ಮುವ ಒಂದು ಸಾಮಾನ್ಯ ಶುದ್ಧ ಕನ್ನಡವನ್ನು ರೂಪಿಸುವ ಮೂಲಕ ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ನಾಡನ್ನು ಒಂದು ಮಾಡಲು ಸಾಧ್ಯ ಎಂದು ಹೇಳಲಾಗಿದೆ. ಕವಿಮಾರ್ಗಕಾರನ ಈ ಆಶಯವನ್ನು ನಿಜವಾಗಿಸಿದವರು ರಾಜ್~ ಎಂದರು.

`ರಾಜ್ ವಿನಯಕ್ಕೆ ಮಿತಿ ಇರಲಿಲ್ಲ. ಸಾಮಾಜಿಕ, ಪೌರಾಣಿಕ ಪಾತ್ರಗಳೆರಡರಲ್ಲೂ ಸಮರ್ಥವಾಗಿ ಪಾತ್ರ ನಿರ್ವಹಿಸಿದ ಸಮರ್ಥ ನಟ ರಾಜ್. ಅವರಿಗೆ ಸರಿಸಾಟಿಯಾಗುವ ನಟರು ಭಾರತೀಯ ಭಾಷೆಗಳಲ್ಲೇ ಇಲ್ಲ~ ಎಂದರು.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಮನುಷ್ಯ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್‌ಕುಮಾರ್ ಅವರು ಆದರ್ಶವಾಗಿ ಕಾಣುತ್ತಾರೆ~ ಎಂದರು.

ಸಮಾರಂಭದಲ್ಲಿ ರಾಜ್‌ಕುಮಾರ್ ಅಭಿನಯದ ಚಲನಚಿತ್ರಗಳ ಗೀತ - ನೃತ್ಯಗಳ ಪ್ರದರ್ಶನ ನಡೆಯಿತು. ಶಿವರಾಜ್ ಕುಮಾರ್ ಅವರು `ನಾ ನಿನ್ನ ಮರೆಯಲಾರೆ~ ಗೀತೆಯನ್ನು ಹಾಗೂ ಪುನೀತ್ ರಾಜ್‌ುಮಾರ್ ಅವರು `ಬಾನಿಗೊಂದು ಎಲ್ಲೆ ಎಲ್ಲಿದೆ~, `ಕಾಣದಂತೆ ಮಾಯವಾದನೋ~ ಗೀತೆಗಳನ್ನು ಹಾಡಿದರು.

ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ಶಾಸಕ ದಿನೇಶ್ ಗುಂಡೂರಾವ್, ನಟ ರಾಘವೇಂದ್ರ ರಾಜ್‌ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಹಾಗೂ ನಟ ಜಗ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.