ADVERTISEMENT

ಶ್ರೇಷ್ಠ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:50 IST
Last Updated 7 ಜುಲೈ 2012, 19:50 IST
ಶ್ರೇಷ್ಠ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳ ಸೃಷ್ಟಿ
ಶ್ರೇಷ್ಠ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳ ಸೃಷ್ಟಿ   

ಬೆಂಗಳೂರು: `ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವದರ್ಜೆಯ ಪ್ರಾಧ್ಯಾಪಕರು ರೂಪುಗೊಳ್ಳದೇ ಹೋದರೆ ಉತ್ತಮ ವಿದ್ಯಾರ್ಥಿಗಳನ್ನು ನೀಡಲು ಸಾಧ್ಯವಿಲ್ಲ. ಭಾರತೀಯ ವಿದ್ಯಾಭವನವು ವಿಶ್ವದರ್ಜೆಯ ಪ್ರಾಧ್ಯಾಪಕರನ್ನು ರೂಪುಗೊಳಿಸುವತ್ತ ಹೆಜ್ಜೆ ಇಡಬೇಕು~ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಸಲಹೆ ನೀಡಿದರು.

ಭಾರತೀಯ ವಿದ್ಯಾಭವನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಭವನದ ಅಮೃತಮಹೋತ್ಸವ ಮತ್ತು ಸಂಸ್ಥಾಪಕ ಡಾ.ಕೆ.ಎಂ. ಮುನ್ಷಿ ಅವರ 125ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ, `ವಿಶ್ವಕವಿ ಟ್ಯಾಗೋರ್ ಸ್ಥಾಪಿಸಿದ `ಶಾಂತಿನಿಕೇತನ~ ದಂತಹ ಶಿಕ್ಷಣ ಸಂಸ್ಥೆಯು ಆರಂಭದಲ್ಲಿದ್ದ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಮುನ್ಷಿ ಅವರು ಸ್ಥಾಪಿಸಿರುವ ವಿದ್ಯಾಭವನವು 75 ವರ್ಷಗಳ ನಂತರವೂ ದಿನಹೊಸ ಬಗೆಯ ಚಿಂತನೆಗೆ ಪ್ರೇರಣೆಯಾಗುತ್ತಿದೆ~ ಎಂದು ಬಣ್ಣಿಸಿದರು.

ಕನ್ನಡಕ್ಕೆ ಅನುವಾದಗೊಂಡಿರುವ ಮುನ್ಷಿ ಅವರ 26 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿದ್ಯಾಭವನದ ಲೋಗೋವನ್ನು ಲೋಕಾರ್ಪಣೆ ಮಾಡಲಾಯಿತು. ಹಿರಿಯ ನಟಿ ಬಿ.ಸರೋಜಾ ದೇವಿ, ಅನುವಾದಕ ಪ್ರೊ.ಎ.ವಿ.ನರಸಿಂಹಮೂರ್ತಿ, ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಇತರರು ಇದ್ದರು.

`ಅತಂತ್ರದೆಡೆಗೆ ಹೆಜ್ಜೆ~

`ಭ್ರಷ್ಟಾಚಾರವನ್ನು ಮುಂದುವರಿಸುವ ಸಲುವಾಗಿಯೇ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿರುವ ಬೆಳವಣಿಗೆಯೇ ರಾಜ್ಯದಲ್ಲಿ ಬಿಜೆಪಿಯು ಅತಂತ್ರದಿಂದ ಅತಂತ್ರದೆಡೆಗೆ ತೆರಳುತ್ತಿದೆ ಎಂಬುದರ ಸೂಚಕ~ ಎಂದು ಸಚಿವ ವೀರಪ್ಪ ಮೊಯಿಲಿ ಅವರು ವಿಶ್ಲೇಷಿಸಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಬದಲಾವಣೆ ಬಿಜೆಪಿ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಆದರೆ ಅರ್ಹತೆಯನ್ನು ಬದಿಗಿಟ್ಟು ಜಾತಿಯನ್ನೇ ಬಂಡವಾಳ ಮಾಡಿಕೊಂಡು ಮುಖ್ಯಮಂತ್ರಿಯನ್ನು ಬದಲಾಯಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಒತ್ತು ನೀಡದ ಬಿಜೆಪಿ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ~ ಎಂದು ದೂರಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.