ADVERTISEMENT

ಶ್ವಾನ ಪ್ರೀತಿ: ಒಡತಿಯರ `ಕ್ಯಾಟ್‌ವಾಕ್', ಮುದ್ದಾಟ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST
ತಮ್ಮ ತಮ್ಮ ಮುದ್ದು ನಾಯಿಗಳೊಂದಿಗೆ ಹೆಜ್ಜೆ ಹಾಕಿದ ಕ್ಷಣ ಚಿತ್ರ
ತಮ್ಮ ತಮ್ಮ ಮುದ್ದು ನಾಯಿಗಳೊಂದಿಗೆ ಹೆಜ್ಜೆ ಹಾಕಿದ ಕ್ಷಣ ಚಿತ್ರ   

ಬೆಂಗಳೂರು: ಕಂದು ಬಣ್ಣದ... ದೊಡ್ಡ ಬಾಯಿಯ ಸುಂದರವಾದ, ನಸುಗಪ್ಪು ಬಣ್ಣದ, ಉದ್ದ ಕೂದಲಿನ, ಕಡುಕಪ್ಪಾದರೂ ಪ್ರೀತಿಯಿಂದ ಮೈ ನೇವರಿಸಲು ಮನಸ್ಸಾಗುವಂತಹ ಚೆಂದದ ನಾಯಿಗಳು ನಗರದಲ್ಲಿ ನಡೆದ ಶ್ವಾನಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು...
ನಾಯಿಗಳ ಮಾಲೀಕರು ತಮ್ಮ ನಾಯಿಗಳನ್ನು ಪ್ರೀತಿಯಿಂದ ಅವರಿಟ್ಟ ಹೆಸರಿಡಿದು ಕರೆದಾಗ ಕಿವಿ ನಿಮಿರಿಸಿ ಬಾಲವನ್ನು ಅಲ್ಲಾಡಿಸುತ್ತ ತಮ್ಮ ಮೂಕ ಪ್ರೀತಿಯನ್ನು ತೋರಿದವು.

ರೋಟರಿ ಸಂಸ್ಥೆಯು ಪ್ರಾಣಿಗಳ ಹಕ್ಕುಗಳ ಅರಿವಿಗಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ `ಶ್ವಾನ ಪ್ರದರ್ಶನ' ದಲ್ಲಿ ವಿವಿಧ ನಾಯಿಗಳು ಎಲ್ಲರ ಕಣ್ಮನ ಸೆಳೆದವು.ಬೆಂಗಳೂರು ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯ ಪಡೆಯ ಸದಸ್ಯ ಆರ್.ಕೆ.ಮಿಶ್ರಾ ಮಾತನಾಡಿ, `ನಾಯಿಗಳು ಮನುಷ್ಯನ ಅತಿ ಪ್ರೀತಿಯ ಪ್ರಾಣಿ. ಮನುಷ್ಯರ ಜತೆ ಅತಿ ಹೊಂದಾಣಿಕೆಯಿಂದ ಇರುವ ಪ್ರಾಣಿಯಾಗಿದೆ. ಅದನ್ನು ಕೆಲವರು ಪ್ರಾಣಿಯೆಂದು ಭಾವಿಸದೆ ತಮ್ಮ ಮನೆಯ ಸದಸ್ಯನಂತೆ ಭಾವಿಸುತ್ತಾರೆ. ಆದ್ದರಿಂದ ಎಲ್ಲರೂ ಅದರ ಜೊತೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ' ಎಂದರು.

`ಇಂದಿನ ಆಧುನಿಕ ಯುಗದ ಯಾಂತ್ರಿಕತೆಯಲ್ಲಿ ಪ್ರೀತಿಯ ಒರತೆಯನ್ನು ಬಯಸುವ ಮನುಷ್ಯನಿಗೆ ನಾಯಿಯು ಹತ್ತಿರದ ಸ್ನೇಹಿತನಂತೆ ವರ್ತಿಸುತ್ತದೆ. ಆದ್ದರಿಂದ ಅದಕ್ಕೆ ಸ್ವಲ್ಪ ನೋವಾದರೂ ಮನುಷ್ಯನಿಗೆ ನೋವಾದಂತೆ ಅವುಗಳ ಒಡೆಯರು ನೋವನ್ನನುಭವಿಸುತ್ತಾರೆ' ಎಂದು ಹೇಳಿದರು.

ಜಪಾನಿನ ಮಯೂನಿ ತಮ್ಮ ಪ್ರೀತಿಯ ನಾಯಿಯ ಬಗ್ಗೆ ಹೆಮ್ಮೆಯಿಂದ ಹೇಳುತ್ತ `ನನ್ನ ನಾಯಿ ಜತೆಗೆ ಕ್ಯಾಟ್‌ವಾಕ್ ಮಾಡಲು ಅತಿ ಸಂತಸವೆನಿಸಿತು. ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದೆ. ಇದರಿಂದ ನಾವು ನಮ್ಮ ಪ್ರೀತಿಯ ನಾಯಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಾಯಕವಾಯಿತು' ಎಂದು ಸಂತಸವನ್ನು ಹಂಚಿಕೊಂಡರು.

`ಇಂದಿನ ದಿನಗಳಲ್ಲಿ ಹಲವು ನಾಯಿಗಳು ಬೀದಿ ಬದಿಯಲ್ಲಿ ಸರಿಯಾದ ಆಹಾರವಿಲ್ಲದೆ, ಪೋಷಣೆಯಿಲ್ಲದೆ ಸಾಯುತ್ತಿವೆ. ಅವು ಕೂಡ ಸಾಕು ಪ್ರಾಣಿಗಳು. ಅವುಗಳನ್ನು ಪ್ರೀತಿಯಿಂದ ನೋಡಿಕೊಂಡು ರಕ್ಷಿಸಬೇಕಾದ ಅಗತ್ಯ ಬಂದೊದಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.