ಬೆಂಗಳೂರು: ಬೆಂಗಳೂರಿನ ಕೃಷ್ಣಪ್ಪ ರಂಗಮ್ಮ ಚಾರಿಟಬಲ್ ಟ್ರಸ್ಟ್‌ನ ಆಸ್ತಿಯಲ್ಲಿ ಒಕ್ಕಲಿಗರ ಸಂಘ ನಡೆಸುತ್ತಿರುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸದಸ್ಯ ಬಿ.ಆರ್. ಸುಬ್ರಹ್ಮಣ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಡಿ.ಎಚ್. ವಘೇಲಾ ಹಾಗೂ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ, ಅಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದೆ.
ಈ ಟ್ರಸ್ಟ್‌ನ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಹೈಕೋರ್ಟ್, ಅಧೀನ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ವಿಚಾರಣಾ ಹಂತದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಕೃಷ್ಣಪ್ಪ ರಂಗಮ್ಮ ಎಂಬುವರು ೧೯೬೨ರಲ್ಲಿ ಯಶವಂತಪುರ ಹೋಬಳಿಯ ೯೬ ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಉಯಿಲು ಬರೆದಿಟ್ಟಿದ್ದರು. ಒಕ್ಕಲಿಗರ ಸಂಘ ೧೯೭೮ರಲ್ಲಿ ಈ ಟ್ರಸ್ಟ್‌ನ ಪಾಲುದಾರರಾಗಿ ಸೇರಿಕೊಂಡಿತು.
ಆಸ್ತಿಯನ್ನು ನಿಗದಿತ ಉದ್ದೇಶಗಳಿಗೆ ಬಳಸುತ್ತಿಲ್ಲ ಎಂಬ ಆರೋಪವೂ ಇತ್ತು. ಅಲ್ಲದೆ ಟ್ರಸ್ಟ್‌ನ ೯೬ ಎಕರೆ ಜಮೀನಿನಲ್ಲಿ ಈಗ ಕೇವಲ ೪೬ ಎಕರೆ ಉಳಿದಿದೆ. ಇದರಿಂದಾಗಿ ಟ್ರಸ್ಟ್‌ನ ಆಸ್ತಿಯಲ್ಲಿ ಸಂಘದ ಯಾವುದೇ ಕಾರ್ಯ ಮುಂದುವರೆಸದಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.