ADVERTISEMENT

ಸಂತೋಷ್ ಹೆಗ್ಡೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಬೆಂಗಳೂರು: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ತಾವು ಅಕ್ರಮ ಆಸ್ತಿ ಗಳಿಕೆ ಮಾಡಿರುವುದಾಗಿ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ತಮ್ಮ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾನಹಾನಿ ಹೇಳಿಕೆ ನೀಡಿದ್ದಾರೆ ಎನ್ನುವುದು ನಿಂಬಾಳ್ಕರ್ ಅವರ ದೂರು.

ಇವರ ವಾದವನ್ನು ಸಿವಿಲ್ ಕೋರ್ಟ್ ಮಾನ್ಯ ಮಾಡದೆ 2010ರ ಜೂನ್ 28ರಂದು ವಜಾಗೊಳಿಸಿತ್ತು. ಈ ಆದೇಶದ ರದ್ದತಿಗೆ ಇವರು ಅದೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಬುಧವಾರ ವಿಚಾರಣೆಗೆ ಬಂದಿತ್ತು.

`ಕುಟುಂಬದ ಸದಸ್ಯರ ಹೆಸರಿನಲ್ಲಿ ನಾನು ಸುಮಾರು 250 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿರುವುದಾಗಿ ಹೆಗ್ಡೆ ಅವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಆರೋಪ ಮಾಡಿದ್ದರು. ನಂತರ ನಡೆದ ತನಿಖೆಯಲ್ಲಿ ನನ್ನ ಆಸ್ತಿ 81 ಲಕ್ಷ ರೂಪಾಯಿ ಇರುವುದು ತಿಳಿದುಬಂದಿತ್ತು.

`ಆದರೆ ಹೆಗ್ಡೆ ಅವರು ಮಾಡಿರುವ ಆರೋಪದಂತೆ ಎಲ್ಲ ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಇದರಿಂದ ಸ್ನೇಹಿತರು ಹಾಗೂ ಸಂಬಂಧಿಕರ ದೃಷ್ಟಿಯಲ್ಲಿ ನನ್ನ ಘನತೆಗೆ ಚ್ಯುತಿ ಉಂಟಾಯಿತು. ಲೋಕಾಯುಕ್ತ ಸ್ಥಾನದಿಂದ ಆಗಲೀ, ವೈಯಕ್ತಿಕವಾಗಿ ಆಗಲೀ ಹೆಗ್ಡೆ ಅವರಿಗೆ ನನ್ನ ಆಸ್ತಿಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆದರೂ ವಿನಾಕಾರಣ ಆರೋಪ ಹೊರಿಸಿದರು~ ಎನ್ನುವುದು ಅವರ ದೂರು.

`ಆದರೆ ನನ್ನ ವಾದವನ್ನು ಅಧೀನ ಕೋರ್ಟ್ ಮಾನ್ಯ ಮಾಡಲಿಲ್ಲ. ನನ್ನ ವಾದ ಆಲಿಸದೆ ಆದೇಶ ಹೊರಡಿಸಿದೆ~ ಎಂದು ಅವರು ಆರೋಪಿಸಿದ್ದಾರೆ. ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.