ADVERTISEMENT

ಸಂತೋಷ್ ಹೆಗ್ಡೆ, ವೀರೇಂದ್ರ ಹೆಗ್ಡೆಗೆ ಜಿಂದಾಲ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ನವದೆಹಲಿ: ಮಾನವ ಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ (ವಿಜ್ಞಾನ- ತಂತ್ರಜ್ಞಾನ), ನ್ಯಾ. ಎನ್. ಸಂತೋಷ್ ಹೆಗ್ಡೆ (ಸಾಮಾಜಿಕ ಅಭಿವೃದ್ಧಿ), ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಡೆ (ಪ್ರಕೃತಿ ಚಿಕಿತ್ಸೆ) ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ (ಗ್ರಾಮೀಣ ಅಭಿವೃದ್ಧಿ ಮತ್ತು ಬಡತನ ನಿವಾರಣೆ) ಸೇರಿದಂತೆ ಹಲವು ಗಣ್ಯರಿಗೆ `ಸೀತಾರಾಂ ಜಿಂದಾಲ್ ಪ್ರತಿಷ್ಠಾನ~ದ ಚೊಚ್ಚಲ ಪ್ರಶಸ್ತಿ ನೀಡಿ ಗುರುವಾರ ಗೌರವಿಸಲಾಯಿತು.

ಕಳೆದ ವರ್ಷ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಪ್ರದಾನ ಮಾಡಲಾಯಿತು. ಕಲಾಂ ಮತ್ತು ಹೆಗ್ಡೆ ದ್ವಯರಿಗೆ ತಲಾ ಒಂದು ಕೋಟಿ ಮತ್ತು ಅಣ್ಣಾ ಅವರಿಗೆ 25 ಲಕ್ಷ ರೂಪಾಯಿ ಚೆಕ್ ನೀಡಲಾಯಿತು.

ಪ್ರಶಸ್ತಿ ಪುರಸ್ಕೃತರು ಜಿಂದಾಲ್ ಪ್ರತಿಷ್ಠಾನದ ಪ್ರಶಸ್ತಿ ಮೊತ್ತವನ್ನು ವಿವಿಧ ಸಂಸ್ಥೆಗಳಿಗೆ ದೇಣಿಗೆ ನೀಡುವುದಾಗಿ  ಪ್ರಕಟಿಸಿ ಔದಾರ್ಯ ಮೆರೆದರು. ಕಲಾಂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ನಾಲ್ಕು ಸಂಸ್ಥೆಗಳಿಗೆ, ಸಂತೋಷ್ ಹೆಗ್ಡೆ ಸೈನಿಕ ಕಲ್ಯಾಣ ನಿಧಿಗೆ, ವೀರೇಂದ್ರ ಹೆಗ್ಡೆ ಉಜಿರೆ ಎಸ್‌ಡಿಎಂ ಕಾಲೇಜಿಗೆ ದೇಣಿಗೆ ನೀಡಿದರು. ಅಣ್ಣಾ ಹಜಾರೆ ರಾಳೇಗಾಣ ಸಿದ್ದಿಯ `ಹಿಂದ್ ಸ್ವರಾಜ್~ ಟ್ರಸ್ಟ್‌ಗೆ ಈ ಹಣ ಕೊಡುವುದಾಗಿ ತಿಳಿಸಿದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾಂ, `ಯುವ ಪೀಳಿಗೆ ಸಮಾಜಕ್ಕಾಗಿ ಏನು ಕೊಡಬಹುದು?~ ಎಂಬ ಗುಟ್ಟು ಹೇಳಿಕೊಟ್ಟರು. ಬಿಡುವಿನ ವೇಳೆಯಲ್ಲಿ ಹಳ್ಳಿಗಳಿಗೆ ಹೋಗಿ ಅನಕ್ಷರಸ್ಥರಿಗೆ ಓದು- ಬರಹ ಹೇಳಿಕೊಡಿ, ಪ್ರತಿಯೊಬ್ಬರು ತಲಾ ಐದು ಗಿಡಗಳನ್ನು ನೆಡಿ. ಆಸ್ಪತ್ರೆಗಳಿಗೆ ತೆರಳಿ ಯಾರೂ ದಿಕ್ಕಿಲ್ಲದ ಅನಾಥ ರೊಗಿಗಳಿಗೆ ಹೂಹಣ್ಣು ಕೊಟ್ಟು ಯೋಗಕ್ಷೇಮ ವಿಚಾರಿಸಿ ಎಂಬ ಸೂತ್ರಗಳನ್ನು ಮುಂದಿಟ್ಟರು.

ಈಚೆಗೆ ತಾವು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕಟ್ಟಿ ಎಂಬ ಪುಟ್ಟ ಪಟ್ಟಣಕ್ಕೆ ಹೋಗಿದ್ದಾಗ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದೇಶಕ್ಕೆ ನಾನೇನು ಕೊಡಬಹುದು ಎಂಬ ಪ್ರಶ್ನೆ ಹಾಕಿದ ಎಂದು ಕಲಾಂ ತಿಳಿಸಿದರು. ಎಲ್ಲ ಯುವಕರಲ್ಲೂ ಈ ಭಾವನೆ ಮೂಡಿದರೆ ದೇಶದ ಚಿತ್ರವೇ ಬದಲಾಗುತ್ತದೆ ಎಂದರು.

ರಾಜ್ಯದ ಹಿಂದಿನ ಲೋಕಾಯುಕ್ತರಾದ ನ್ಯಾ. ಸಂತೋಷ್ ಹೆಗ್ಡೆ, `ನಾನು ಕಾನೂನು ಬಿಟ್ಟು ಏನೂ ಮಾಡಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಏನು ಮಾಡಬಹುದೋ ಅವೆಲ್ಲವನ್ನು ಮಾಡಿದ್ದೇನೆ. ಬೇರೆಯವರು ಈ ಕೆಲಸ ಮಾಡದಿದ್ದರಿಂದ ಪ್ರಶಸ್ತಿ ಹುಡುಕಿಕೊಂಡು ಬಂದಿದೆ~ ಎಂದರು.

ಧರ್ಮಸ್ಥಳದ ವೀರೇಂದ್ರ ಹೆಗ್ಡೆ, ಬೆಂಗಳೂರಿನ ಜಿಂದಾಲ್ ಚಿಕಿತ್ಸಾ ಕೇಂದ್ರದಿಂದ ಸ್ಫೂರ್ತಿ ಪಡೆದು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಿಸಿದ್ದಾಗಿ ಹೇಳಿದರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಧರ್ಮಸ್ಥಳ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

`ನಾನು ಪ್ರಶಸ್ತಿ ಸ್ವೀಕರಿಸುವ ಮೊದಲು ಅದನ್ನು ಕೊಡುವವರ ಹಿನ್ನೆಲೆ ನೋಡುತ್ತೇನೆ. ಸೀತಾರಾಂ ಜಿಂದಾಲ್ ಮನೆತನ ಶುದ್ಧ ಹಸ್ತದ ಹಿನ್ನೆಲೆ ಹೊಂದಿರುವುದರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದೇನೆ. ಆರು ತಿಂಗಳ ಹಿಂದೆ ಮತ್ತೊಬ್ಬರು ಒಂದು ಕೋಟಿ ರೂಪಾಯಿ ಪ್ರಶಸ್ತಿ ಪ್ರಕಟಿಸಿದರು. ಅವರ ಹಿನ್ನೆಲೆ ಸರಿಯಾಗಿ ಇಲ್ಲದಿದ್ದರಿಂದ ತಿರಸ್ಕರಿಸಿದೆ~ ಎಂದು ಅಣ್ಣಾ ಹಜಾರೆ ಸ್ಪಷ್ಟಪಡಿಸಿದರು.

ಲಿಂಗ ಅನುಪಾತ ಹಾಗೂ ಲಿಂಗ ಸಮಾನತೆಗಾಗಿ ಕೆಲಸ ಮಾಡುತ್ತಿರುವ `ಧನ್ ಪ್ರತಿಷ್ಠಾನ~, ಗ್ರಾಮೀಣ ಶಾಲೆಗಳಿಗೆ ಹೊಸ ಬೋಧನಾ ವಿಧಾನ ಅಭಿವೃದ್ಧಿ ಪಡಿಸುತ್ತಿರುವ `ರಿಷಿ ವ್ಯಾಲಿ ಶಿಕ್ಷಣ ಕೇಂದ್ರ, ಕೊಯಮತ್ತೂರಿನ ಶಂಕರ ಕಣ್ಣಿನ ಆಸ್ಪತ್ರೆ, ಜನರ ಸಶಕ್ತೀಕರಣದ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ `ಉತ್ಥಾನ್~ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಬರಾಕ್‌ಪುರದ ರಾಮಕೃಷ್ಣ ವಿವೇಕಾನಂದ ಆಶ್ರಮಗಳಿಗೂ ಪ್ರಶಸ್ತಿ ನೀಡಲಾಯಿತು.

ಆರ್‌ಟಿಐ ಕಾರ್ಯಕರ್ತರಾದ ಮನೀಷ್ ಸಿಸೋಡಿಯಾ, ರಜನಿಕಾಂತ್ ದಲೂರಾಂಜಿ ಬೋರ್ಲೆ,  ಶಿಕ್ಷಣ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ರಾಜೇಂದ್ರ ಕೆ. ಸಿಂಗ್ಲಾ, ಭ್ರಷ್ಟಾಚಾರ ವಿರೋಧಿ ಆಂದೋಲನದ ಕಾರ್ಯಕರ್ತೆ ಶೇಲ್ಹಾ ಮಸೂದ್ (ಮರಣೋತ್ತರ), ಪ್ರಾಮಾಣಿಕ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕ, ಐಎಫ್‌ಎಸ್ ಅಧಿಕಾರಿ ಸಂದೀಪ್ ಚತುರ್ವೇದಿ, ಪೆಟ್ರೋಲ್ ಕಲಬೆರಕೆ ವಿರುದ್ಧ ಹೋರಾಡಿ ಪ್ರಾಣ ತೆತ್ತ ತೈಲ ಕಂಪೆನಿ ಅಧಿಕಾರಿ ಮಂಜುನಾಥ ಷಣ್ಮುಗಂ (ಮರಣೋತ್ತರ) ಗುಡ್ಡಗಾಡು ಜನರ ಅಭಿವೃದ್ಧಿಗೆ ದುಡಿಯುತ್ತಿರುವ ಅತುಲ್ ಕುಮಾರ್, ಜಾರ್ಖಂಡ್ ಲೋಕಸೇವಾ ಆಯೋಗದ ಅಕ್ರಮಗಳನ್ನು ಬಯಲಿಗೆಳೆದ ಪವನ್‌ಕುಮಾರ್ ಚೌಧರಿ, `ಸ್ಟಿಂಗ್ ಕಾರ್ಯಾಚರಣೆ~ಗೆ ಹೆಸರಾದ ಪತ್ರಕರ್ತ ರಮೇಶ್ ವರ್ಮ, ರೈಲ್ವೆಯಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ಅಜಯ್ ಬಿ. ಬೋಸ್, ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ವೇಳೆ ಪ್ರಾಣ ಒತ್ತೆಯಿಟ್ಟು ಹೋರಾಡಿದ ತುಕಾರಾಂ ಒಂಬ್ಳೆ, ಮೇ. ಸಂದೀಪ್ ಉನ್ನಿ ಕೃಷ್ಣನ್ (ಇಬ್ಬರಿಗೂ ಮರಣೋತ್ತರ) ಹಾಗೂ ದೆಹಲಿಯ ಬಾಟ್ಲ ಹೌಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮೋಹನ್‌ಚಂದ್ ಶರ್ಮ (ಮರಣೋತ್ತರ) ಅವರಿಗೂ ಜಿಂದಾಲ್ ಪ್ರತಿಷ್ಠಾನದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆರ್ಟ್ ಆಫ್ ಲೀವಿಂಗ್ ಶ್ರೀ ರವಿಶಂಕರ್ ಗುರೂಜಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪ್ರತಿಷ್ಠಾನದ ಸೀತಾರಾಂ ಜಿಂದಾಲ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.