ADVERTISEMENT

ಸಂತ್ರಸ್ತರಿಗೆ ಸೂರು ಕೊಡುವ ಯೋಗ್ಯತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:25 IST
Last Updated 16 ಫೆಬ್ರುವರಿ 2011, 19:25 IST

ಟ್ಯಾಗೋರ್ 150ನೇ ಜನ್ಮವಾರ್ಷಿಕೋತ್ಸವ: ರಾಜ್ಯ ಸರ್ಕಾರದ ನೀತಿಗೆ ಕೆ.ಮರುಳಸಿದ್ದಪ್ಪ ಕಿಡಿ

ಬೆಂಗಳೂರು: ‘ನೆರೆಹಾವಳಿಯಲ್ಲಿ ನೊಂದವರಿಗೆ ಸೂರು ಕೊಡುವ ಯೋಗ್ಯತೆ ಇಲ್ಲದ ಸರ್ಕಾರ 25 ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲು ಹೊರಟಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಅವರು ತೀವ್ರವಾಗಿ ಖಂಡಿಸಿದರು.ಸಮುದಾಯ ಬೆಂಗಳೂರು ಘಟಕವು ‘ಪ್ರಜಾವಾಣಿ’ಯ ಸಹಭಾಗಿತ್ವದಲ್ಲಿ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ 150ನೇ ಜನ್ಮ ವಾರ್ಷಿಕದ ಏರ್ಪಡಿಸಿದ್ದ ‘ಸಮುದಾಯ ರಾಷ್ಟ್ರೀಯ ಉತ್ಸವ’ದ ಅಂಗವಾಗಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತರ ಪ್ರದೇಶದಲ್ಲಿ ಮಾಯಾವತಿ ತನ್ನ ಪ್ರತಿಮೆ ಸ್ಥಾಪಿಸಿ ರಾಜಕೀಯ ಮಾಡುತ್ತಿದ್ದಾರೆ. ಅದೇ ರಾಜಕೀಯ ಕರ್ನಾಟಕದಲ್ಲೂ ಕಂಡು ಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರು ಸೂರಿಗಾಗಿ ಅಂಗಲಾಚುತ್ತಿದ್ದರೆ, ಇತ್ತ ಸರ್ಕಾರ ಕೋಟ್ಯಂತರ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದೆ. ಪ್ರತಿಮೆ ನಿರ್ಮಾಣಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗಿದೆಯೋ ಅಷ್ಟೇ ಸಂಖ್ಯೆಯ ಅರ್ಜಿಗಳು ಪ್ರತಿಮೆ ನಿರ್ಮಾಣ ಮಾಡಲು ನಮಗೆ ಗುತ್ತಿಗೆ ಕೊಡಿ ಎಂದು ಈಗಾಗಲೇ ಸರ್ಕಾರಕ್ಕೆ ಬಂದಿರಬಹುದು’ ಎಂದು ವ್ಯಂಗ್ಯವಾಡಿದರು.

‘ಈಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐದು ಕೋಟಿ ಖರ್ಚು ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೂ ಇದಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಮಠಗಳಿಗೆ ಕೋಟ್ಯಂತರ ಹಣ ನೀಡುತ್ತಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರಾ ಹೀಗೆ ಪ್ರತಿ ಉತ್ಸವಕ್ಕೂ ಕೋಟಿ ಲೆಕ್ಕದಲ್ಲಿ ಖರ್ಚು ಮಾಡಲಾಗುತ್ತಿದೆ. ಆದರೆ ಜನರ ಸಮಸ್ಯೆಗಳತ್ತ ಗಮನ ಹರಿಸದಿರುವ ಈ ಕಾಲ ದರಿದ್ರ, ಅವನತಿಯ ಕಾಲವಾಗಿದೆ’ ಎಂದು ಟೀಕಿಸಿದರು.

ಈ ಪರಿಸ್ಥಿತಿಯಲ್ಲಿ ರವೀಂದ್ರನಾಥರ ವಿಚಾರಗಳು ಅತ್ಯಂತ ಪ್ರಸ್ತುತ ಎಂದು ಬಣ್ಣಿಸಿದ ಅವರು, ‘ದೇಶದಲ್ಲಿ ಮೂರು ರೀತಿಯ ರಾಷ್ಟ್ರವಾದಗಳಿವೆ. ಬಂಕಿಮಚಂದ್ರ ಚಟರ್ಜಿ ಉಗ್ರ ರಾಷ್ಟ್ರವಾದವನ್ನು ಪ್ರತಿಪಾದಿಸಿದರು. ಸ್ವಾಮಿ ವಿವೇಕಾನಂದರು ಸಾತ್ವಿಕ. ಧರ್ಮದ ತಳಹದಿಯ ರಾಷ್ಟ್ರವಾದದ ಪರಿಕಲ್ಪನೆಯನ್ನು ನೀಡಿದರು. ಆದರೆ ಇವರೆಡೂ ವಾದಗಳಿಗೆ ಪರ್ಯಾಯವಾಗಿ ಟ್ಯಾಗೋರರು ಹಲವು ಧರ್ಮ, ಜಾತಿಗಳ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾದವನ್ನು ಮಂಡಿಸಿದರು. ತಮ್ಮ ಕಾಲಕ್ಕಿಂತ ಮುಂದುವರೆದ ಚಿಂತನೆಯನ್ನು ಹೊಂದಿದ್ದರಿಂದ ಅವರಿಗೆ ಈ ಪರಿಕಲ್ಪನೆ ನೀಡಲು ಸಾಧ್ಯವಾಯಿತು’ ಎಂದರು.‘ಟ್ಯಾಗೋರರು ಜನಗಳ ಮಧ್ಯೆ ಬೆಳೆದವರು. ಅಂತೆಯೇ ರೈತರು ಸಂಕಷ್ಟದಲ್ಲಿದ್ದಾಗ ತಮಗೆ ದೊರೆತ ನೊಬೆಲ್ ಪ್ರಶಸ್ತಿಯಿಂದ ಬಂದ ರೂ 1.10 ಲಕ್ಷ ಮೊತ್ತವನ್ನು ರೈತರ ಸಹಕಾರಿ ಸಂಘ ಸ್ಥಾಪನೆಗೆ ಬಳಸಿದರು’ ಎಂದರು.

‘ಮಹಾತ್ಮ ಗಾಂಧೀಜಿಯವರಿಗೆ ಮಹಾತ್ಮ ಎಂದು ಹೆಸರಿಟ್ಟಿದ್ದೇ ಟ್ಯಾಗೋರರು. ಆದರೂ ಎಷ್ಟೋ ವಿಷಯಗಳಲ್ಲಿ ಗಾಂಧೀಜಿಯವರನ್ನು ಟೀಕಿಸುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದರು. ಅವರ ಚರಕದ ಮೂಲಕ ಸ್ವಾವಲಂಬನೆ ಸಾಧಿಸುವ ಕಲ್ಪನೆಯನ್ನು ಟ್ಯಾಗೋರರು ವಿರೋಧಿಸಿದ್ದರು’ ಎಂದರು.‘ಟ್ಯಾಗೋರ್ ಅವರ ಜನ್ಮಶತಾಬ್ದಿ ಸಂದರ್ಭದಲ್ಲಿ ಅವರ ಸವಿನೆನಪನ್ನು ಶಾಶ್ವತವಾಗಿರಿಸಲು ಅಂದು ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ನಗರದ ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ವಿವಿಧೆಡೆ ಕಲಾಕ್ಷೇತ್ರಗಳನ್ನು ನಿರ್ಮಿಸಿದರು’ ಎಂದು ನುಡಿದರು.

ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಅವರು ಮಾತನಾಡಿ, ‘ಬ್ರಿಟಿಷರು ಪಬ್ಲಿಕ್ ಶಾಲೆಗಳನ್ನು ತೆರೆಯುವ ಮೂಲಕ ಇಲ್ಲಿನ ಜನಪದ, ಭಾಷೆಯನ್ನು ಮರೆಸುತ್ತಿದ್ದ ಸಂದರ್ಭದಲ್ಲಿಯೇ ಟ್ಯಾಗೋರರು ಬಂಗಾಳದಲ್ಲಿ ಶಾಂತಿನಿಕೇತನವನ್ನು ಆರಂಭಿಸಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಆರಂಭಿಸಿದರು. ಭಾರತೀಯ ವಿಚಾರಧಾರೆಯ ಸಮರ್ಥ ಪ್ರತಿನಿಧಿಯಾಗಿದ್ದ ಅವರು ಆ ವಿಚಾರಧಾರೆಗೆ ಭದ್ರ ಬುನಾದಿ ಹಾಕಿದರು’ ಎಂದು ಶ್ಲಾಘಿಸಿದರು.

‘ಗಾಂಧೀಜಿ ಹಾಗೂ ಟ್ಯಾಗೋರರು, ರಾಷ್ಟ್ರೀಯತೆ ಅಳವಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿರುವ ಕಾಲಘಟ್ಟದಲ್ಲಿ ಬದುಕಿದ್ದವರು. ಅವರು ತಮ್ಮ ತಮ್ಮ ಮಾನವತಾವಾದಿ ವಿಚಾರಧಾರೆಯ ಮೂಲಕ ಮುಂದಿನ ಬೆಳವಣಿಗೆಗೆ ಮಾರ್ಗದರ್ಶನ ನೀಡಿದರು’ ಎಂದು ಹೇಳಿದರು.ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಪ ಕಾರ್ಯದರ್ಶಿ ಉಪೇಂದ್ರ ಶರ್ಮಾ ಮಾತನಾಡಿ, ‘ರವೀಂದ್ರರ 150ನೇ ಜನ್ಮದಿನದ ಅಂಗವಾಗಿ ಕೇಂದ್ರ ಸಾಹಿತ್ಯ, ಸಂಗೀತ, ನಾಟಕ ಅಕಾಡೆಮಿಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಂತಿನಿಕೇತನದಲ್ಲಿ ಮೂರು ದಿನಗಳ ಕಾಲ ಟ್ಯಾಗೋರರು ಮೆಚ್ಚಿಕೊಂಡಿದ್ದ ಸಂತಾಲಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು’ ಎಂದರು.ಸಮುದಾಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್, ಸಮುದಾಯ ಬೆಂಗಳೂರು ಘಟಕದ ಕಾರ್ಯದರ್ಶಿ ರವೀಂದ್ರ ಸಿರಿವರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.