ADVERTISEMENT

ಸಂದೀಪ್ ಉನ್ನಿಕೃಷ್ಣನ್ ಚಿಕ್ಕಪ್ಪ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 19:20 IST
Last Updated 3 ಫೆಬ್ರುವರಿ 2011, 19:20 IST

ನವದೆಹಲಿ (ಪಿಟಿಐ): ಮುಂಬೈ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಾವಿನಿಂದ ತೀವ್ರ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಲ್ಲದೇ, ನಂತರ ಸರ್ಕಾರ ನಡೆದುಕೊಂಡ ರೀತಿಯಿಂದ ಮನನೊಂದ ಅವರ ಚಿಕ್ಕಪ್ಪ ಇಲ್ಲಿನ ಸಂಸತ್ ಭವನದ ಮುಂಭಾಗದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.

ಸಂದೀಪ್ ತಂದೆ ಉನ್ನಿಕೃಷ್ಣನ್ ಅವರ ಕಿರಿಯ ಸಹೋದರ ಕೆ.ಮೋಹನನ್ (35) ಆತ್ಮಹತ್ಯೆಗೆ ಯತ್ನಿಸಿದವರು. ಸಂಜೆ 5.45ರ ಸುಮಾರಿಗೆ ಸಂಸತ್‌ನ ನಾಲ್ಕನೇ ದ್ವಾರದ ಮುಂಭಾಗ ವಿಜಯ ಚೌಕ ಬಳಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸಮೀಪದಲ್ಲಿದ್ದ ಪೊಲೀಸರು ಬೆಂಕಿ ನಂದಿಸಿ, ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರು. ಅವರಿಗೆ ಶೇ 85ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂದೀಪ್ ಸಾವಿನ ನಂತರ ಸರ್ಕಾರ ನಡೆದುಕೊಂಡ ರೀತಿಯಿಂದ ತಮಗೆ ನೋವಾಗಿತ್ತು. ಸಾವಿನ ಸಂದರ್ಭದಲ್ಲಿ ಸಂದೀಪ್ ಯಾವ ರೀತಿಯಲ್ಲಿ ನೋವು ಅನುಭವಿಸಿರಬಹುದು ಎಂದು ಆಘಾತವಾಗಿತ್ತು. ಹಾಗಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಆಸ್ಪತ್ರೆಯಲ್ಲಿ ಮೋಹನನ್ ಹೇಳಿಕೆ ನೀಡಿದ್ದಾರೆ. ಕುಟುಂಬದವರ ಬಳಿ ತಾವು ಎರ್ನಾಕುಳಂಗೆ ತೆರಳುತ್ತಿರುವುದಾಗಿ ತಿಳಿಸಿದ್ದ ಮೋಹನ್, ನಂತರ ನವದೆಹಲಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.