ADVERTISEMENT

ಸಂವಿಧಾನದ ಚೌಕಟ್ಟಿನಲ್ಲಿಯೇ ಇದೆ

ಅಕ್ರಮ–ಸಕ್ರಮ ಯೋಜನೆ ಜಾರಿ: ಸರ್ಕಾರದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:34 IST
Last Updated 24 ಅಕ್ಟೋಬರ್ 2016, 19:34 IST
ಸಂವಿಧಾನದ ಚೌಕಟ್ಟಿನಲ್ಲಿಯೇ ಇದೆ
ಸಂವಿಧಾನದ ಚೌಕಟ್ಟಿನಲ್ಲಿಯೇ ಇದೆ   

ಬೆಂಗಳೂರು: ‘ಅಕ್ರಮ ಸಕ್ರಮ ಯೋಜನೆ ಜಾರಿಯಲ್ಲಿ ಸರ್ಕಾರ ಯಾವುದೇ ಕಾನೂನು ಉಲ್ಲಂಘಿಸಿಲ್ಲ ಮತ್ತು ಇದನ್ನು ಸಂವಿಧಾನದ ಚೌಕಟ್ಟಿನಲ್ಲಿಯೇ ಜಾರಿಗೆ ತರಲಾಗುವುದು’ ಎಂದು ಅಡ್ವೊಕೇಟ್‌ ಜನರಲ್‌ ಎಂ.ಆರ್‌. ನಾಯಕ್‌ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

ಅಕ್ರಮ ಸಕ್ರಮ ಕುರಿತಾಗಿ ರಾಜ್ಯ ಸರ್ಕಾರ 2014ರ ಮೇ 28ರಂದು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು  ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ. ಬೂದಿಹಾಳ್‌  ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ  ಹಾಜರಾಗಿದ್ದ ಜಯ್ನಾ ಕೊಠಾರಿ, ‘ಸರ್ಕಾರವು ವಾಣಿಜ್ಯ ಕಟ್ಟಡಗಳನ್ನು ಶೇಕಡ 25ರಷ್ಟು ಹಾಗೂ ಬಡಾವಣೆ  ಪ್ರದೇಶದಲ್ಲಿ ಶೇಕಡ 50ರಷ್ಟು ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ನಿರ್ಧರಿಸಿದೆ. ಆದರೆ ಇದನ್ನು ಯಾವ ಆಧಾರದಲ್ಲಿ ಈ ರೀತಿ ವಿಂಗಡಿಸಲಾಗಿದೆ ಎಂಬ ವಿವರಣೆಯಿಲ್ಲ’ ಎಂದು ಆಕ್ಷೇಪಿಸಿದರು.

ಅರ್ಜಿದಾರರ ಪರ ಹಾಜರಾಗಿದ್ದ ಮತ್ತೊಬ್ಬ ವಕೀಲ ಡಾ. ರಾಮಚಂದ್ರನ್ ಅವರು, ‘ಸರ್ಕಾರದ ಕ್ರಮ ಅಸಾಂವಿಧಾನಿಕ ಹಾಗೂ ಅಸಮಂಜಸ ಕ್ರಮಗಳಿಂದ ಕೂಡಿದೆ’ ಎಂದರು.

ಇದಕ್ಕೆ ಉತ್ತರಿಸಿದ ನಾಯಕ್, ‘ರಾಜ್ಯದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ನಿವೇಶನ ಮತ್ತು ಮಾಸ್ಟರ್‌ ಪ್ಲಾನ್‌ಗಳ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರುವ ಏಕೈಕ ಉದ್ದೇಶದಿಂದಲೇ ಅಕ್ರಮ ಸಕ್ರಮ ಯೋಜನೆಯ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ’ ಎಂದು  ತಿಳಿಸಿದರು.
ವಿಚಾರಣೆಯನ್ನು ಮಂಗಳವಾರಕ್ಕೆ (ಅ.24) ಮುಂದೂಡಲಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್‌
ಬೆಂಗಳೂರು: ರಾಜರಾಜೇಶ್ವರಿ  ನಗರದ ಐಡಿಯಲ್‌ ಹೋಮ್ಸ್‌ ಬಡಾವಣೆ ಪ್ರದೇಶದಲ್ಲಿನ ತಮ್ಮ ಮನೆಯ ತೆರವಿಗೆ ಬೆಂಗಳೂರು ಜಿಲ್ಲಾಡಳಿತ ನೀಡಿದ ನೋಟಿಸ್‌ ಪ್ರಶ್ನಿಸಿ ನಟ ದರ್ಶನ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್ ಅವರ ಏಕಸದಸ್ಯ ಪೀಠದ ಮುಂದೆ ಮಂಗಳವಾರ (ಅ.25) ವಿಚಾರಣೆಗೆ ಬರಲಿದೆ.‘ನಟ ದರ್ಶನ್ ಅವರು 2,100 ಚದರ ಅಡಿಯಷ್ಟು ರಾಜಕಾಲುವೆ ಪ್ರದೇಶ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ’ ಎಂಬ ಆರೋಪದ ಕಾರಣ ಮನೆಯ ತೆರವಿಗೆ ಜಿಲ್ಲಾಡಳಿತ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 104 ರ ಅಡಿಯಲ್ಲಿ ನೋಟಿಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT