ADVERTISEMENT

ಸಂಸ್ಕೃತಿ, ಅಧ್ಯಾತ್ಮ ಕುರಿತು 16ರಿಂದ ಬೇಸಿಗೆ ಶಿಬಿರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಬೆಂಗಳೂರು: ಸತ್ಯಸಾಯಿ ಸೇವಾ ಸಂಘಟನೆ ಆಶ್ರಯದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಅಧ್ಯಾತ್ಮದ ಕುರಿತು ಬೇಸಿಗೆ ಶಿಬಿರ ನಗರದ ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ವೈಟ್ ಫೀಲ್ಡ್ ಕ್ಯಾಂಪಸ್‌ನಲ್ಲಿ ಇದೇ 16ರಿಂದ 20ರ ವರೆಗೆ ನಡೆಯಲಿದೆ.

ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ 16ರಿಂದ 35 ವರ್ಷದೊಳಗಿನ ವಿದ್ಯಾರ್ಥಿಗಳು ಹಾಗೂ ಯುವಜನರು ಶಿಬಿರದಲ್ಲಿ ಪಾಲ್ಗೊಳ್ಳುವರು. 460 ಹುಡುಗರು ಹಾಗೂ 440 ಹುಡುಗಿಯರು ಸೇರಿದಂತೆ 900 ಮಂದಿ ಭಾಗವಹಿಸುವರು.
 
ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ಪ್ರತಿದಿನ ಪ್ರಾರ್ಥನೆ, ಯೋಗ, ಧ್ಯಾನ, ತಾಂತ್ರಿಕ ತರಗತಿಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸತ್ಯಸಾಯಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅನುಭವ ಹಂಚಿಕೊಳ್ಳುವರು. ವಿವಿಧ ಕ್ಷೇತ್ರದ ವಿದ್ವಾಂಸರು, ಹಿರಿಯ ಭಕ್ತರು ಬೆಳಿಗ್ಗೆ ಹಾಗೂ ಮಧ್ಯಾಹ್ನದ ತರಗತಿ ನಡೆಸಿಕೊಡುವರು. 

ಉಪನ್ಯಾಸ: 16ರಂದು ಬೆಳಿಗ್ಗೆ 8ಕ್ಕೆ ಶಿಬಿರ ಆರಂಭವಾಗಲಿದೆ. ಅಂದು ಡಾ. ಗುರುರಾಜ ಕರ್ಜಗಿ, ಪ್ರೊ. ಪ್ರೇಮಾ ಪಾಂಡುರಂಗ, ರುಚಿರ್ ದೇಸಾಯಿ, ಸಂಜಯ್ ಸಾಹ್ನಿ, 17ರಂದು ಮಿಕ್ಕೆಲಿನಿ ಕೃಷ್ಣ, ಕಮಲಾ ಪಾಂಡ್ಯ, ನಿಮಿಷ್ ಪಾಂಡ್ಯ, ಶಿಕಾರಿಪುರ ಕೃಷ್ಣಮೂರ್ತಿ, ಡಾ. ಶಿವಕುಮಾರ್, ಬಿ.ಎನ್. ನರಸಿಂಹಮೂರ್ತಿ, 18ರಂದು ಬಿ.ಎಸ್. ವಿಜಯ್ ಸಾಯಿ, ಡಾ.ಪಿಟ್ರೆ, ರಾಜೀವ್ ರಾಜನ್, ಸಾಯಿ ಗಿರಿಧರ್, ಡಾ. ರವಿ ಕುಮಾರ್ ಉಪನ್ಯಾಸ ನೀಡುವರು.
 
19ರಂದು ಡಾ.ದ್ವಾರಕಾರಣಿ, ಡಾ. ವೆಂಕಟೇಶ್ವರ್ ರಾವ್, ಯಶಸ್, ಜಯೇಂದ್ರಪುರಿ ಸ್ವಾಮೀಜಿ, ಪ್ರೊ. ಅನಿಲ್ ಕುಮಾರ್, 20ರಂದು ಚಿದ್ರುಪಾನಂದ ಸರಸ್ವತಿ, ಅಮೈ ದೇಶಪಾಂಡೆ, ಶ್ರೀನಿವಾಸ ರಾವ್, ವಿಜಯ್ ಮೆನನ್ ಉಪನ್ಯಾಸ ನೀಡುವರು. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಪ್ರತಿದಿನ ಸಂಜೆ 615ರಿಂದ 7.15ರ ವರೆಗೆ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, 16ರಂದು ಉಸ್ತಾದ್ ಫಯಾಜ್ ಖಾನ್, 17ರಂದು ವಿದ್ವಾನ್ ಶ್ರೀರಾಮ್ ಪಾರ್ಥಸಾರಥಿ, 18ರಂದು ವಿದ್ವಾನ್ ಟಿಪ್ಪು ಮತ್ತು ವಿದುಷಿ ಹರಿಣಿ, 19ರಂದು ವಿದ್ವಾನ್ ಆಕಾಶ್ ಕಾರ್ಯಕ್ರಮ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.