ಬೆಂಗಳೂರು: ಹಬ್ಬದ ವಾತಾವರಣ ಮನೆಮಾಡಿದ್ದ ಆ ಇಡೀ ಪರಿಸರವೇ ಶೃಂಗಾರಗೊಂಡಂತೆ ಇತ್ತು. ಅಲ್ಲಿ ಗಂಗೆ, ಗೋಮಾತೆಗೆ ಪೂಜೆ ಸಲ್ಲಿಸಿದ ಮುತ್ತೈದೆಯರು ಕೆರೆಗೆ ಬಾಗಿನ ಅರ್ಪಿಸಿದರೆ, ಚಿಣ್ಣರು ‘ಪರಿಸರ ಉಳಿಸಿ, ಕೆರೆ ಸಂರಕ್ಷಿಸಿ’ ಸಾರುವ ಮೂಲಕ ಕಾಳಜಿ ಮೆರೆದರು.
ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆಯ ಆವರಣದಲ್ಲಿ ‘ಪರಿಸರ ಹಿತ ಸಂರಕ್ಷಣಾ ಸಮಿತಿ’ ಭಾನುವಾರ ಆಯೋಜಿಸಿದ್ದ ಕೆರೆ ಹಬ್ಬದ ಚಿತ್ರಣಗಳಿವು.
ಹಬ್ಬದಲ್ಲಿ ಮಹಿಳೆಯರು ಪೂಜೆ, ಬಾಗಿನ ಅರ್ಪಣೆಯಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಕೊಂಡಿದ್ದರು. ವಿವಿಧ ಶಾಲೆಗಳ ಮಕ್ಕಳು ಮರ, ಗಿಡ, ಭೂಮಿ, ನವಿಲು, ಮೊಲದ ವೇಷ ತೊಟ್ಟು ಕೆರೆಯ ಸುತ್ತ ಪ್ರಕೃತಿ ರಕ್ಷಣೆಯ ಸಂದೇಶ ಸಾರಿದರು.
ಹಿಂದೊಮ್ಮೆ ಪಾಳುಬಿದ್ದು ಪುನಶ್ಚೇತನಗೊಂಡಿರುವ ಕೆರೆಯನ್ನು ಉತ್ತಮ ವಾಯು ವಿಹಾರ ತಾಣವನ್ನಾಗಿ ಸಂರಕ್ಷಿಸಬೇಕೆಂಬ ಉದ್ದೇಶದಿಂದ ಆಯೋಜಿಸಿದ್ದ ಈ ಹಬ್ಬದಲ್ಲಿ ಪಾಲಿಕೆ ಸದಸ್ಯೆ ನಳಿನಿ ಮಂಜು ಭಾಗವಹಿಸಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಿದ್ದಪ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬೆಂಗಳೂರು ಉಳಿಯಬೇಕಾದರೆ ಕೆರೆಗಳ ರಕ್ಷಣೆ ಮತ್ತು ಪೋಷಣೆ ಅಗತ್ಯ. ಬದುಕಲು ನೀರು, ಗಿಡ–ಮರಗಳು ಅವಶ್ಯಕ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.
‘ಶಾಲೆಯಲ್ಲಿ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಪರಿಸರ ನಾಶದ ದುಷ್ಪರಿಣಾಮ ಮತ್ತು ರಕ್ಷಣೆಯ ಪ್ರಯೋಜನಗಳ ಕುರಿತಂತೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.
‘ಈ ಕೆರೆಗೆ ಒಳಚರಂಡಿ ನೀರು ಸೇರಿ ಪರಿಸರವನ್ನು ಮಾಲಿನ್ಯ ಮಾಡುತ್ತಿದೆ. ಅದನ್ನು ತಡೆಗಟ್ಟಲು ಶೀಘ್ರವೇ ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣ ಮಾಡಲು ನಳಿನಿ ಅವರು ಕ್ರಮಕೈಗೊಳ್ಳಬೇಕು’ ಎಂದರು.
ಕಾಂಗ್ರೆಸ್ ಮುಖಂಡ ಎಂ. ರಾಜ್‌ಕುಮಾರ್ ಮಾತನಾಡಿ, ‘ಪರಿಸರ ಮಾಲಿನ್ಯದೊಂದಿಗೆ ಬದುಕುತ್ತಿರುವ ನಾವೆಲ್ಲಾ ಪರಿಸರ ರಕ್ಷಣೆ ಮಾಡುವ ಪಣ ತೊಡಬೇಕು. ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.
‘ಕೆರೆ ಕರಗುವ ಸಮಯ ’ ಪುಸ್ತಕದ ಲೇಖಕ ಕೆರೆ ಮಂಜುನಾಥ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.