ADVERTISEMENT

ಸಂಸ್ಕೃತ ಶಾಲೆ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 20:10 IST
Last Updated 8 ಅಕ್ಟೋಬರ್ 2012, 20:10 IST

ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನ (ಎಓಎಲ್) ವೇದ ಆಗಮ ಸಂಸ್ಕೃತ ಮಹಾಪಾಠ ಶಾಲೆಯ ಎರಡನೇ ಘಟಿಕೋತ್ಸವ ಸಮಾರಂಭ ಇತ್ತೀಚೆಗೆ ನಗರದಲ್ಲಿ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಎಓಎಲ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಂಸ್ಕೃತ ಭಾಷೆ ಹಾಗೂ ಪ್ರಾಚೀನ ಧಾರ್ಮಿಕ ವಿಧಿವಿಧಾನಗಳ ಮಹತ್ವಗಳನ್ನುವಿವರಿಸಿದರು.

`ಭಾರತದ ಪ್ರಾಚೀನ ಸಂಸ್ಕೃತಿಯೇ ದೇಶದ ಐಕ್ಯತೆಗೆ ಕಾರಣವಾಗಿದೆ. ನಾಲ್ಕು ದಶಕಗಳ ಹಿಂದೆ ದೇಶದ ವಿವಿಧೆಡೆಯ ಜನ ಬೇರೆ ಭಾಗಗಳಿಗೆ ಹೋದಾಗ ಸಂವಹನಕ್ಕಾಗಿ ತುಂಬಾ ಕಷ್ಟಪಡುತ್ತಿದ್ದರು. ಆದರೆ, ಸಂಸ್ಕೃತ ಪಂಡಿತರು ದೇಶದ ಯಾವುದೇ ಭಾಗಕ್ಕೆ ಹೋದರೂ ಸಂವಹನ ಮಾಡುತ್ತಿದ್ದರು, ಅಂಬೇಡ್ಕರ್ ಸಹ ಸಂಸ್ಕೃತವು ದೇಶದ ರಾಷ್ಟ್ರೀಯ ಭಾಷೆಯಾಗಬೇಕೆಂದು ಬಯಸಿದ್ದರು~ ಎಂದರು.

`ಪುರೋಹಿತರೆಂದರೆ ಮನುಕುಲಕ್ಕೆ ಒಳ್ಳೆಯದನ್ನು ಮಾಡುವವರು ಎಂದರ್ಥ. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಸುವರ್ಣ ಅವಕಾಶ ನಿಮಗೆ ಸಿಕ್ಕಿದೆ, ಜ್ಞಾನಾರ್ಜನೆಗೆ ಅಂತ್ಯ ಎಂಬುದು ಇಲ್ಲ~ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ `ಶಿವಾಗಮ ವಿದ್ಯಾನಿಧಿ~ ಪದವಿಯನ್ನು ಪ್ರದಾನ ಮಾಡಲಾಯಿತು.
ಇದೇ ವೇಳೆ `ಮಹಾನ್ಯಾಸಂ~ ಮತ್ತು `ಪದಮಂತ್ರಂ~ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಚಿದ್ಭವಾನಂದ ಆಶ್ರಮದ ಸಂಸ್ಥಾಪಕ ಓಂಕಾರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಿ.ಜಿ.ನಂದಕುಮಾರ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ರಾಮಾನುಜ, ಶಾಲೆಯ ಪ್ರಾಂಶುಪಾಲ ಎ.ಎಸ್.ಸುಂದರಮೂರ್ತಿ ಶಿವಂ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.