ADVERTISEMENT

‘ಸಂಹಿತೆಯಿಂದ ಶರಿಯತ್‌ ಕಾನೂನನ್ನು ಹೊರಗಿಡಿ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2016, 19:43 IST
Last Updated 11 ನವೆಂಬರ್ 2016, 19:43 IST

ಬೆಂಗಳೂರು: ‘ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆಯಿಂದ ಮುಸ್ಲಿಮರ ಶರಿಯತ್‌ ಕಾನೂನನ್ನು ಹೊರಗಿಡಬೇಕು’ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯೆ ಡಾ. ಆಸ್ಮಾ ಝೆಹ್ರಾ ಒತ್ತಾಯಿಸಿದರು.

ಜಮಾತ್‌–ಎ–ಇಸ್ಲಾಮಿ–ಹಿಂದ್‌ ಸಂಘಟನೆ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಂ ಸಮುದಾಯದಲ್ಲಿನ ತಲಾಕ್ ಪದ್ಧತಿಯ ಕುರಿತು ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ. ಸಮುದಾಯದ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಮುಸ್ಲಿಂ ಮಹಿಳಾ ಕಾಯ್ದೆ–1986, ವಿವಾಹ ಕಾಯ್ದೆ–1939 ಮತ್ತು ವಿಚ್ಛೇದನಾ ಕಾಯ್ದೆಯಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ– 1986 ಗಳಲ್ಲಿಯೇ ಉತ್ತಮ ನೀತಿಗಳಿವೆ. ಅವನ್ನು ಸರ್ಕಾರ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು’ ಎಂದು ಹೇಳಿದರು.

‘1,400 ವರ್ಷಗಳಿಂದ ಶರಿಯತ್‌ ಕಾನೂನು ಸಮುದಾಯದಲ್ಲಿ ಆಚರಣೆಯಲ್ಲಿದೆ. ಅದರನ್ವಯ ತಲಾಕ್ ಪದ್ಧತಿ ಇದೆ. ಇದರಿಂದ ಮಹಿಳೆಯರ ಶೋಷಣೆ ಆಗುತ್ತಿಲ್ಲ. ಬದಲಿಗೆ ತನ್ನನ್ನು ಇಷ್ಟಪಡದ ಪತಿಯಿಂದ ಪತ್ನಿ ವಿಮುಕ್ತಳಾಗುತ್ತಾಳೆ. ಅವಳಿಗೆ ಮೇಹರ್‌ ಎಂಬ ಜೀವನ ನಿರ್ವಹಣೆಯ ಧನ ದೊರೆಯುತ್ತದೆ.  ಮರುಮದುವೆ ಆಗಲು ಅವಕಾಶವಿರುತ್ತದೆ’ ಎಂದರು.

‘ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡುವಂತೆ ಒತ್ತಾಯಿಸಿ ಮುಂದಿನ ತಿಂಗಳಿನಿಂದ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ತಸ್ನೀಮ್ ಫರ್ಝಾನಾ ಮಾತನಾಡಿ, ‘ಹೊಸ ಕಾಯ್ದೆಗಳನ್ನು ರೂಪಿಸುವುದಕ್ಕಿಂತ ಸಾಮಾಜಿಕ ಸುಧಾರಣೆ ಇಂದಿನ ಅಗತ್ಯವಾಗಿದೆ. ಸರ್ಕಾರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಬದಲು ದೇಶದಲ್ಲಿನ ವರದಕ್ಷಿಣೆ, ಹೆಣ್ಣು ಶಿಶು ಹತ್ಯೆಯಂತಹ ಸಮಸ್ಯೆಗಳನ್ನು ಬಗೆಹರಿಸಲು  ಆದ್ಯತೆ ನೀಡಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.