ADVERTISEMENT

ಸಕ್ರಿಯ ಪೌರತ್ವದಿಂದ ಸಮಸ್ಯೆ ದೂರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 18:45 IST
Last Updated 13 ಸೆಪ್ಟೆಂಬರ್ 2011, 18:45 IST

ಬೆಂಗಳೂರು: `ಸಮಾಜದ ಸಮಸ್ಯೆಗಳಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ದೂರುತ್ತೇವೆ. ಅದರಲ್ಲಿ ನಿಜಾಂಶ ಇರಬಹುದು. ಆದರೆ ಸಕ್ರಿಯ ಪೌರತ್ವವನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು ವರ್ತಿಸಿದರೆ ಅನೇಕ ಸಮಸ್ಯೆಗಳನ್ನು ಮೂಲದಲ್ಲಿಯೇ ಪರಿಹಾರಿಸಬಹುದಾಗಿದೆ~ ಎಂದು ಎಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು.

ಸಿಎಂಸಿಎ ಸಂಸ್ಥೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಸ್ಫೂರ್ತಿ-2011-12, ಸರ್ಕಾರಿ ಶಾಲಾ ಪೌರ ಕ್ಲಬ್‌ಗಳ ಕಾರ್ಯಕ್ರಮ~ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಮಳೆ ನೀರು ಸಂಗ್ರಹ ಯೋಜನೆ ಅಳವಡಿಸಿಕೊಂಡರೆ ನಗರದಲ್ಲಿ ಪ್ರವಾಹ ಭೀತಿ ಇರುವುದಿಲ್ಲ. ಹತ್ತು ವರ್ಷದ ಹಿಂದೆಯೇ ಈ ಯೋಜನೆ ಅಸ್ತಿತ್ವಕ್ಕೆ ಬರಬೇಕಿತ್ತು. ಸಣ್ಣ ಸಣ್ಣ ಸಮಸ್ಯೆಗಳನ್ನು ಮನೆಗಳಲ್ಲಿಯೇ ಪರಿಹರಿಸಿಕೊಳ್ಳುವುದು ಒಳಿತು~ ಎಂದು ಹೇಳಿದರು.

`ನಗರದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆ ಇದೆ. ಸುಮಾರು 40 ಲಕ್ಷ ವಾಹನಗಳಿವೆ. ಸರಾಸರಿ ತಲಾ ಇಬ್ಬರಿಗೆ ಒಂದು ವಾಹನವಿದೆ ಎಂದಾಗುತ್ತದೆ. ಹೀಗೆಯೇ ವಾಹನಗಳ ಸಂಖ್ಯೆ ಏರುತ್ತಾ ಹೋದರೆ ಸಂಚಾರ ಸಮಸ್ಯೆ ಉಲ್ಬಣಿಸುತ್ತದೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಸ್ವಯಂಪ್ರೇರಿತರಾಗಿ ಅನುಸರಿಸುವ ಗುಣ ನಾಗರಿಕರಿಗೆ ಬಂದರೆ ಅಪಘಾತಗಳು ತಪ್ಪುತ್ತವೆ~ ಎಂದು ಹೇಳಿದರು.

`ನಮಗಿಂತಲೂ ಮುಂದಿನ ಪೀಳಿಗೆಯವರು ಬುದ್ಧಿವಂತರಾಗಿರುತ್ತಾರೆ. ಪೋಷಕರೇ ಮಕ್ಕಳಿಗೆ ಹೇಳಿಕೊಡಬೇಕು ಎಂಬುದೇನೂ ಇಲ್ಲ. ಮಕ್ಕಳಿಗೆ ತಿಳಿ ಹೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಮಕ್ಕಳ ಶಕ್ತಿ ಸರಿಯಾದ ದಿಕ್ಕಿನಲ್ಲಿ ಸಾಗುವಂತಾದರೆ ರಾಷ್ಟ್ರಾಭಿವೃದ್ಧಿಯಾಗುತ್ತದೆ. ಸಕ್ರಿಯ ಪೌರತ್ವದ ಉಪಯೋಗಗಳನ್ನು ಚಿಕ್ಕಂದಿನಲ್ಲೇ ತಿಳಿಸಿಕೊಟ್ಟರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ~ ಎಂದು ಅಭಿಪ್ರಾಯಪಟ್ಟರು.

`ಸರ್ಕಾರಿ ಶಾಲೆ, ಕಾನ್ವೆಂಟ್‌ಗಳು ಎಂಬ ಭೇದಭಾವ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿದೆ. ಖಾಸಗಿ ಶಾಲೆಗಳಿಗೆ ನೀಡುವ ಅರ್ಧದಷ್ಟು ಸೌಲಭ್ಯವನ್ನು ಸರ್ಕಾರಿ ಶಾಲೆಗಳಿಗೆ ನೀಡಿದರೂ ಈ ಶಾಲೆಗಳ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಬಹುದು~ ಎಂದರು.

ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಕೆ.ಆರ್.ನಿರಂಜನ್, `ನಗರದಲ್ಲಿ ನಿತ್ಯ ಸುಮಾರು 3500 ಟನ್ ಘನತ್ಯಾಜ್ಯ ಸೃಷ್ಟಿಯಾಗುತ್ತಿದೆ. ಮನೆಯಲ್ಲಿಯೇ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ವಿಧಾನ ಅಳವಡಿಸಿಕೊಂಡರೆ ಸಾವಿರಾರು ಟನ್ ಕಸವನ್ನು ನಿರ್ವಹಿಸುವ ಸಮಸ್ಯೆ ತಪ್ಪುತ್ತದೆ~ ಎಂದು ಹೇಳಿದರು.

`ಮಳೆ ನೀರು ಸಂಗ್ರಹ, ಗಿಡಮರಗಳನ್ನು ನೆಡಲು ಬಿಬಿಎಂಪಿ ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ನಗರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳಿದ್ದು ಇವರೆಲ್ಲರೂ ಕೈ ಜೋಡಿಸಿದರೆ ಸಮಸ್ಯೆಗಳ ಸಂಕೀರ್ಣತೆಯನ್ನು ನಿವಾರಿಸಬಹುದು. ಜನರ ಬದುಕನ್ನು ಹಸನು ಮಾಡಬಹುದು~ ಎಂದರು.

ಸಿಎಂಸಿಎ ಅಧ್ಯಕ್ಷ ಎ.ಎನ್.ಯಲ್ಲಪ್ಪರೆಡ್ಡಿ, `ನಗರದಲ್ಲಿ 25 ಸಾವಿರ ಮಕ್ಕಳು ಚಿಂದಿ ಆಯುತ್ತಿದ್ದಾರೆ. ಇವರಲ್ಲಿ ಕನಿಷ್ಠ ಒಂದು ಸಾವಿರ ಮಕ್ಕಳಿಗಾದರೂ ಸರ್ಕಾರ ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ವ್ಯವಸ್ಥೆ ಮಾಡಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು. ಇತರ ಮಕ್ಕಳಂತೆ ಅವರೂ ಕಲಿಕೆಯಲ್ಲಿ ತೊಡಗಲು ಸಹಕರಿಸಬೇಕು~ ಎಂದು ಮನವಿ ಮಾಡಿದರು.

ಸಕ್ರಿಯ ಪೌರತ್ವದ ಮಹತ್ವವನ್ನು ವಿವರಿಸುವ ವಸ್ತು ಪ್ರದರ್ಶನವನ್ನು ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಸ್ಥೆಗಳ ಟ್ರಸ್ಟ್‌ನ ಅಧ್ಯಕ್ಷ ಜಿ.ಎಸ್.ವೀರಭದ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.