ಬೆಂಗಳೂರು: ಕಾರಿನ ಗಾಜುಗಳಿಗೆ ಅಳವಡಿಸಿರುವ ಕೂಲಿಂಗ್ ಪೇಪರ್ (ಫಿಲ್ಮ್) ತೆಗೆಸದವರ ವಿರುದ್ಧ ಈವರೆಗೆ 7 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು, ಏಳು ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
`ಕೂಲಿಂಗ್ ಪೇಪರ್ ಅನ್ನು ಕಡ್ಡಾಯವಾಗಿ ತೆಗೆಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ನಗರದಲ್ಲಿ ಕಾರುಗಳಿಗೆ ಕೂಲಿಂಗ್ ಪೇಪರ್ ತೆಗೆಸಲು ಜೂನ್ 7 ರವರೆಗೆ ಗಡುವು ನೀಡಲಾಗಿತ್ತು. ಆ ನಂತರವೂ ಕೂಲಿಂಗ್ ಪೇಪರ್ ತೆಗೆಸದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ `ಪ್ರಜಾವಾಣಿ~ಗೆ ತಿಳಿಸಿದರು.
`ಈಗಾಗಲೇ ಶೇ 95ರಷ್ಟು ವಾಹನ ಸವಾರರು ಕಾರಿನ ಗಾಜುಗಳಿಗೆ ಅಳವಡಿಸಿದ್ದ ಕೂಲಿಂಗ್ ಪೇಪರ್ ಅನ್ನು ತೆಗೆಸಿದ್ದಾರೆ. ಮೊದಲ ಬಾರಿಗೆ ಸಿಕ್ಕಿ ಬಿದ್ದು ನೂರು ರೂಪಾಯಿ ದಂಡ ಕಟ್ಟಿರುವ ಚಾಲಕ, ಕೂಲಿಂಗ್ ಪೇಪರ್ ತೆಗೆಸದೆ ಮತ್ತೆ ಪೊಲೀಸರಿಗೆ ಸಿಕ್ಕಿ ಬಿದ್ದರೆ ರೂ 300 ದಂಡ ವಸೂಲಿ ಮಾಡಲಾಗುವುದು.
ಮೂರನೇ ಬಾರಿಯೂ ನಿಯಮ ಉಲ್ಲಂಘಿಸಿದರೆ, ರೂ 300 ದಂಡದ ಜತೆಗೆ ಆರ್‌ಸಿ ಬುಕ್ ರದ್ದು ಪಡಿಸುವಂತೆ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು~ ಎಂದು ಸಲೀಂ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.