ಬೆಂಗಳೂರು: `ಹವಾಮಾನಕ್ಕೆ ಹೊಂದುವಂತಹ ಹಣ್ಣುಗಳನ್ನು ಬೆಳೆಯುವ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೆ ತರಲಾಗುವುದು. ಈ ಯೋಜನೆಗಾಗಿ 305 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ~ ಎಂದು ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ ಹೇಳಿದರು.
ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಅವರ 96 ನೇ ಜನ್ಮ ದಿನ ಸ್ಮರಣಾರ್ಥ ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಈ ಯೋಜನೆಯಡಿಯ ಪ್ರಾಯೋಗಿಕವಾಗಿ ರಾಜ್ಯದ ಪ್ರತಿ ತಾಲ್ಲೂಕಿನ ಎರಡು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಯ ಹವಾಮಾನಕ್ಕೆ ಹೊಂದುವಂತೆ ಹಣ್ಣುಗಳನ್ನು ಬೆಳೆಯಲಾಗುವುದು. ಈ ಉದ್ದೇಶಕ್ಕಾಗಿ ಈ ವರ್ಷ 105 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಯೋಜನೆ ಯಶಸ್ವಿಯಾದರೆ ಬೇರೆ ತಾಲ್ಲೂಕುಗಳಿಗೂ ಹಂತ- ಹಂತವಾಗಿ ವಿಸ್ತರಿಸಲಾಗುವುದು~ ಎಂದು ಸಚಿವರು ಹೇಳಿದರು.
`ಈ ಯೋಜನೆಯು ಸಫಲವಾದರೆ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ಹಣ್ಣುಗಳನ್ನು ಕೂಡ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ~ ಎಂದು ಅವರು ತಿಳಿಸಿದರು.
ಉಪನ್ಯಾಸ ನೀಡಿದ ಪತ್ರಕರ್ತ ಶ್ರೀ ಪಡ್ರೆ, `ಹಲಸು ನಮ್ಮ ರಾಜ್ಯದಲ್ಲಿ ಅತಿ ನಿರ್ಲಕ್ಷಿತವಾದ ವೃಕ್ಷ. ಹಲಸಿನ ಹಣ್ಣಿನ ಉಪಯೋಗ ನಮ್ಮ ಜನಕ್ಕೆ ಅಷ್ಟಾಗಿ ತಿಳಿದಿಲ್ಲ. ಆದರೆ, ಮಲೇಷ್ಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಹಲಸನ್ನು ಕೃಷಿ ಬೆಳೆಯನ್ನಾಗಿ ಬೆಳೆಯುತ್ತಾರೆ. ಅಲ್ಲಿ ಹಲಸಿನ ವಿವಿಧ ರೀತಿಯ ಉಪಯೋಗವನ್ನು ಕಂಡುಕೊಂಡಿದ್ದಾರೆ~ ಎಂದರು.
`ಹಲಸನ್ನು ಬರೀ ಹಣ್ಣಾಗಿ ಮಾತ್ರ ಉಪಯೋಗಿಸದೆ, ಅದನ್ನು ತರಕಾರಿಯನ್ನಾಗಿಯೂ ಸಹ ಬಳಕೆ ಮಾಡಬಹುದು. ಅದಕ್ಕಾಗಿ ಹಾಪ್‌ಕಾಮ್ಸ ಹಲಸನ್ನು ತರಕಾರಿಯನ್ನಾಗಿಯೂ ಮಾರಾಟ ಮಾಡಿ ಜನರೆಲ್ಲ ಬಳಕೆ ಮಾಡುವಂತೆ ಮಾಡಲು ಗಮನಹರಿಸಬೇಕು~ ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ. ಹೇಮಚಂದ್ರಸಾಗರ್, ಬಿಬಿಎಂಪಿ ಸದಸ್ಯರಾದ ಅನಿಲ್ ಕುಮಾರ್, ಉದಯಶಂಕರ್, ಕಂದಾಯ ಇಲಾಖೆಯ ಕಾರ್ಯದರ್ಶಿ ಅಮರ ನಾರಾಯಣ, ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ.ಜಿ.ಜಗದೀಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.