ADVERTISEMENT

`ಸಮರ್ಥವಾದ ವಿಪತ್ತು ನಿರ್ವಹಣಾ ವ್ಯವಸ್ಥೆ ಅಗತ್ಯ'

ಕಾರ್ಯಾಗಾರದಲ್ಲಿ ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಬೆಂಗಳೂರು: `ಭಯೋತ್ಪಾದಕ ದಾಳಿಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಮರ್ಥವಾದ ವಿಪತ್ತು ನಿರ್ವಹಣಾ ವ್ಯವಸ್ಥೆ ಜಾರಿಗೆ ಬರಬೇಕು. ದೇಶದ ಆಂತರಿಕ ರಕ್ಷಣಾ ವ್ಯವಸ್ಥೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು' ಎಂದು ಸಂಸತ್‌ನ ನಿವೃತ್ತ ವಿಶೇಷ ಕಾರ್ಯದರ್ಶಿ ವಿ.ಬಾಲಚಂದ್ರನ್ ಹೇಳಿದರು.

ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಜತೆಯಾಗಿ ಏರ್ಪಡಿಸಿರುವ `ನಗರದಲ್ಲಿ ವಿಪತ್ತು ಸ್ಥಿತಿ ನಿರ್ವಹಣೆ : ಅತ್ಯುತ್ತಮ ಅಂತರರಾಷ್ಟ್ರೀಯ ಪದ್ಧತಿಗಳು' ಕಾರ್ಯಾಗಾರದಲ್ಲಿ ಸೋಮವಾರ `ಮುಂಬೈ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಗೆ ವಹಿಸಬೇಕಾದ ಕ್ರಮಗಳು' ವಿಷಯದ ಬಗ್ಗೆ ಅವರು ಮಾತನಾಡಿದರು.

`ಯಾವುದೇ ವಿಪತ್ತು ಎದುರಾದಾಗ ಪೊಲೀಸ್ ವ್ಯವಸ್ಥೆ, ಆಂಬುಲೆನ್ಸ್ ಸೇವೆ, ಅಗ್ನಿಶಾಮಕ ದಳ ಹಾಗೂ ತುರ್ತು ಸ್ವಯಂಸೇವಕ ಪಡೆ ಸಮನ್ವ ಯದಿಂದ ಕಾರ್ಯನಿರ್ವಹಿಸಬೇಕು. ಆದರೆ, ಮುಂಬೈ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಈ ರೀತಿಯ ಸಮನ್ವಯ ಸಾಧ್ಯವಾಗಲಿಲ್ಲ. ಹೀಗಾಗಿ ಮುಂಬೈ ದಾಳಿಯಲ್ಲಿ ಹೆಚ್ಚು ಪ್ರಾಣಹಾನಿಯಾಯಿತು. ಇಂತಹ ದಾಳಿಗಳನ್ನು ಸಮರ್ಪಕವಾಗಿ ನಿಭಾಯಿಸಲು ವಿಪತ್ತು ನಿರ್ವಹಣಾ ವ್ಯವಸ್ಥೆ ಜಾರಿಗೆ ಬರಬೇಕು' ಎಂದು ಹೇಳಿದರು.

`ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ನಂತರ ಅಲ್ಲಿ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಲಾಗಿದೆ.

ವಿಪತ್ತು ಸಂಭವಿಸಿದಾಗ ರಕ್ಷಣಾ ಕಾರ್ಯ ನಿರ್ವಹಿಸುವ ಎಲ್ಲ ವಿಭಾಗಗಳ ಮಧ್ಯೆ ಸರಿಯಾದ ಸಂಪರ್ಕ ಸಾಧಿಸಿ ಪ್ರಾಣಹಾನಿ ತಪ್ಪಿಸುವ ವ್ಯವಸ್ಥೆ ಅಲ್ಲಿ ಜಾರಿಯಲ್ಲಿದೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಭಯೋತ್ಪಾದಕ ದಾಳಿ ನಿಭಾಯಿಸಲೆಂದೇ ವಿಶೇಷ ತರಬೇತಿ ಹೊಂದಿದ ಪಡೆಯನ್ನು ಸಜ್ಜುಗೊಳಿಸಬೇಕಾದ ಅಗತ್ಯವಿದೆ' ಎಂದರು.

`ದಾಳಿಗೂ ಮುನ್ನ ಮುಂಬೈ ಪೊಲೀಸರಿಗೆ ಮೊಬೈಲ್ ಸಂದೇಶ ಕಳಿಸಿದ್ದೆವು ಎಂದು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹೇಳಿದ್ದರು. ಆದರೆ, ಭಯೋತ್ಪಾದಕರ ನುಸುಳುವಿಕೆ ಬಗ್ಗೆ ಒಂದು ಮೊಬೈಲ್ ಸಂದೇಶ ಕಳಿಸಿ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನಾಗುವ ಪರಿಪಾಠ ಸರಿಯಲ್ಲ. ಒಂದು ವೇಳೆ ಮುಂಬೈ ಪೊಲೀಸರೂ ಆ ಮೊಬೈಲ್ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಆಗುವ ಅನಾಹುತ ತಪ್ಪಿಸಬಹುದಿತ್ತು' ಎಂದು ಹೇಳಿದರು.

`ಮುಂಬೈನ ತಾಜ್ ಹೋಟೆಲ್ ಹಾಗೂ ಶಿವಾಜಿ ಟರ್ಮಿನಲ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಭಯೋತ್ಪಾದಕ ದಾಳಿಯ ದೃಶ್ಯಾವಳಿಗಳು ದಾಖಲಾಗುತ್ತಿದ್ದವು. ಆ ದೃಶ್ಯಾವಳಿಗಳನ್ನು ಗಮನಿಸಿ ಅದನ್ನು ಕೂಡಲೇ ಪೊಲೀಸರಿಗೆ ತಿಳಿಸುವ ಪ್ರಯತ್ನಗಳು ನಡೆಯಲೇ ಇಲ್ಲ. ಸಿಸಿ ಟಿವಿ ದೃಶ್ಯಾವಳಿಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸುವ ಕೆಲಸ ಇಂದಿಗೂ ಆಗುತ್ತಿಲ್ಲ. ಪೊಲೀಸರು ಗುಪ್ತಚರ ವಿಭಾಗ ಹಾಗೂ ಸೀಮಾ ಸುಂಕ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೆ ಹಲವು ದಾಳಿಗಳನ್ನು ತಡೆಗಟ್ಟಬಹುದು. ಅಲ್ಲದೇ ಪ್ರತಿಷ್ಠಿತ ಹೋಟೆಲ್‌ಗಳು ಹಾಗೂ ಮಾಲ್‌ಗಳು ಖಾಸಗಿ ಭದ್ರತಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು' ಎಂದು ತಿಳಿಸಿದರು.

ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಎಡಿಜಿಪಿ ಅಲೋಕ್ ಮೋಹನ್, `ರಾಜ್ಯದಲ್ಲಿ ಭಯೋತ್ಪಾದಕ ದಾಳಿ ಎದುರಿಸಲು 2008ರಿಂದ ಆಂತರಿಕ ಭದ್ರತಾ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಭಯೋತ್ಪಾದಕ ನಿಗ್ರಹ ಕಮಾಂಡೊ ಪಡೆ (ಗರುಡ) ಯಾವುದೇ ದಾಳಿಯನ್ನು ಎದುರಿಸಲು ಸಮರ್ಥವಾಗಿದೆ' ಎಂದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಎಡಿಜಿಪಿ ಎಂ.ಎನ್.ರೆಡ್ಡಿ, `ಆಂತರಿಕ ಭದ್ರತೆ ಬಲಗೊಳ್ಳಲು ಅಪರಾಧ ಪ್ರಕರಣಗಳ ದಾಖಲೀಕರಣ ಸರಿಯಾಗಿ ಆಗಬೇಕು. ಗುಪ್ತಚರ ದಳ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು' ಎಂದರು.

ಕುಂದು ಕೊರತೆ ಮತ್ತು ಮಾನವಹಕ್ಕು ವಿಭಾಗದ ಐಜಿಪಿ ಅಲೋಕ್ ಕುಮಾರ್, `ಖೋಟಾ ನೋಟು ಚಲಾವಣೆ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವವರ ಮೇಲೆ ಸ್ಥಳೀಯ ಪೊಲೀಸರು ಕಣ್ಣಿಡಬೇಕು. ಮಾದಕ ವಸ್ತು ಹಾಗೂ ಖೋಟಾ ನೋಟು ಚಲಾವಣೆಯ ಹಿಂದಿನ ಜಾಲವನ್ನು ಸಿಬ್ಬಂದಿ ಭೇದಿಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.