ADVERTISEMENT

ಸಮಾಜ ಒಡೆಯುವ ದೊಡ್ಡ ಪಿತೂರಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಮು ಹಿಂಸೆ ತಡೆ ಮಸೂದೆಯ ಹಿಂದೆ ಸಮಾಜವನ್ನು ಒಡೆಯುವ ದೊಡ್ಡ ಪಿತೂರಿ ಅಡಗಿದೆ ಎಂದು ಖ್ಯಾತ ರಾಜಕೀಯ ತಜ್ಞ ಹಾಗೂ ದೆಹಲಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಕೇಶ್ ಸಿನ್ಹ ಶನಿವಾರ ಇಲ್ಲಿ ಆರೋಪಿಸಿದರು.

ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರವು ನಗರದ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಕೋಮು ಹಿಂಸೆ ತಡೆ ಮಸೂದೆ: ರಾಷ್ಟ್ರದ ಏಕತೆಗೆ ಧಕ್ಕೆ~ ಕುರಿತ ಸಂವಾದ ದಲ್ಲಿ ಪಾಲ್ಗೊಂಡು ಮಾತನಾಡಿದರು.

`ದೇಶದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕೇಂದ್ರ  ಸರ್ಕಾರ ಕೋಮು ಹಿಂಸೆ ತಡೆ ಮಸೂದೆ ಬಗ್ಗೆ ಜನರಲ್ಲಿ ಮನವರಿಕೆ ಮಾಡದೆಯೇ ಜಾರಿಗೊಳಿಸಲು ಮುಂದಾಗುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಲು ಹೊರಟಿದೆ~ ಎಂದು ದೂರಿದರು.

`ಒಂದು ಸಮುದಾಯವನ್ನು ಓಲೈಸುವ ನೆಪದಲ್ಲಿ ಹಿಂದೂ ಮತ್ತು ಮುಸಲ್ಮಾನರ ನಡುವೆ ದ್ವೇಷಮಯ ಭಾವನೆಗಳನ್ನು ಬಿತ್ತಿ ರಾಜಕೀಯ ಲಾಭ ಪಡೆಯುವುದು ಕೇಂದ್ರದ ಉದ್ದೇಶವಾಗಿದೆ.
 
ಯುಪಿಎ ಮೈತ್ರಿಕೂಟ ಸರ್ಕಾರದ ಇತ್ತೀಚಿನ ರಾಜಕೀಯ ಹಾಗೂ ನೀತಿಗಳನ್ನು ಗಮನಿಸಿದರೆ ಭಾರತ ಭಾರತವಾಗಿಯೇ ಉಳಿಯಬಾರದು ಎನ್ನುವ ಸ್ಥಿತಿ ನಿರ್ಮಾಣ ಮಾಡಿದಂತಿದೆ~ ಎಂದು ಆತಂಕ ವ್ಯಕ್ತಪಡಿಸಿದರು.

`ಈ ಮಸೂದೆ ಕಾನೂನು ರೂಪದಲ್ಲಿ ಜಾರಿಗೆ ಬಂದರೆ, ಕೋಮು ಹಿಂಸಾಚಾರ ಪ್ರಕರಣಗಳು ನಡೆದ ಸಂದರ್ಭಗಳಲ್ಲಿ ಬಹುಸಂಖ್ಯಾತರನ್ನು ಗುರಿ ಮಾಡಿ ಶಿಕ್ಷೆಗೊಳಪಡಿಸುವ ಅಪಾಯವಿದೆ. ತನಿಖೆ ಸಂದರ್ಭದಲ್ಲಿ ಒಂದು ಸಮುದಾಯಕ್ಕೆ ವಿಶೇಷ ಆದ್ಯತೆ ನೀಡಿ, ಮತ್ತೊಂದು ಸಮುದಾಯವನ್ನು ಕಡೆಗಣಿಸುವ ದುರುದ್ದೇಶವೂ ಈ ಮಸೂದೆ ಜಾರಿಯ ಹಿಂದೆ ಅಡಗಿದೆ~ ಎಂದರು.

`ಬ್ರಿಟೀಷರು 1870ರಲ್ಲಿ 270 ಬುಡಕಟ್ಟು ಸಮುದಾಯಗಳನ್ನು ಕ್ರಿಮಿನಲ್ ಬುಡಕಟ್ಟು ಕಾಯ್ದೆಗೆ ಸೇರಿಸಿದ ರೀತಿ, ಈಗಿನ ಉದ್ದೇಶಿತ ಕೋಮು ಹಿಂಸೆ ತಡೆ ಮಸೂದೆಯು ಕ್ರಿಮಿನಲ್ ಹಿಂದೂ ಮಸೂದೆಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಈ ಕಾನೂನು ಅನ್ವಯಿಸುವುದಿಲ್ಲ ಎನ್ನುವುದಾದಲ್ಲಿ ಅಲ್ಲಿನ ಕಾಶ್ಮೀರಿ ಪಂಡಿತರಿಗೆ ಯಾವ ರೀತಿಯ ರಕ್ಷಣೆ ಸಿಗಲು ಸಾಧ್ಯ?~ ಎಂದು ಪ್ರಶ್ನಿಸಿದರು.

ಅತಿಥಿಯಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ್, `ಕೇವಲ ಅಲ್ಪಸಂಖ್ಯಾತರನ್ನು ಓಲೈಸಲು ಕೇಂದ್ರ ಸರ್ಕಾರ ಕೋಮು ಹಿಂಸೆ ತಡೆ ಮಸೂದೆಯನ್ನು ಜಾರಿಗೆ ತರಲು ಹೊರಟಲ್ಲಿ ಅದು ಸಮಾನತೆ ಸಾರುವ ಸಂವಿಧಾನದ 14ನೇ ಕಲಂನ ಉಲ್ಲಂಘನೆಯಾಗಲಿದೆ~ ಎಂದರು.

`ಕೋಮು ಹಿಂಸೆ ತಡೆ ಮಸೂದೆ ಜಾರಿಯ ಉದ್ದೇಶ ಎರಡೂ ಸಮುದಾಯಗಳ ಹಿತಾಸಕ್ತಿ ಕಾಪಾಡುವಂತಿರಬೇಕು. ನಿರ್ದಿಷ್ಟ ಸಮುದಾಯವನ್ನು ತುಚ್ಛೀಕರಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ~ ಎಂದರು.
ಶಿಕ್ಷಣ, ಸಾಮಾಜಿಕ ಅಧ್ಯಯನ ಕೇಂದ್ರದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಪ್ರೊ.ವಿ. ಕೃಷ್ಣಭಟ್ಟ ಉಪಸ್ಥಿತರಿದ್ದರು. ಆನಂತರ ಡಾ. ರಾಕೇಶ್ ಸಿನ್ಹ ಅವರೊಂದಿಗೆ ಸಂವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.