ಬೆಂಗಳೂರು: `ಸಮಾಜ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ವೃದ್ಧಿಸಲು ಪ್ರತಿಭಾ ಶೋಧ ಪರೀಕ್ಷೆಯನ್ನು ಮೇ 27 ರಂದು ಏರ್ಪಡಿಸಲಾಗಿದೆ~ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್) ನಿರ್ದೇಶಕ ಪ್ರೊ.ಆರ್.ಎಸ್. ದೇಶಪಾಂಡೆ ಗುರುವಾರ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಜ್ಞಾನ ಆಯೋಗ, ಐಸೆಕ್ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಯೋಜನೆಯನ್ನು ರೂಪಿಸಲಾ ಗಿದೆ~ ಎಂದರು. `ಬೆಂಗಳೂರು ವಿಭಾಗದಲ್ಲಿ ಸುಮಾರು 800 ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾರಂಭಿಕ ಹಂತವಾಗಿ ಯೋಜನೆಯನ್ನು ಆರಂಭಿಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಪರೀಕ್ಷೆಯನ್ನು ಐದು ಜಿಲ್ಲೆಗಳ 10 ಕೇಂದ್ರಗಳಲ್ಲಿ ನಡೆಸಲಾ ಗಿತ್ತು. 800ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಅತಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿ ಗಳನ್ನು ಆರಿಸಲಾಗಿದೆ ಎಂದರು.
`ಅತಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಮಾಸಿಕ 500 ರೂಪಾಯಿ ಮತ್ತು ಕರ್ನಾಟಕ ರಾಜ್ಯ ಜ್ಞಾನ ಆಯೋಗದ ವತಿಯಿಂದ ವಾರ್ಷಿಕ 2,500 ರೂಪಾಯಿ ವಿದ್ಯಾರ್ಥಿ ವೇತನಗಳನ್ನು ಪದವಿಯ ಮೂರು ವರ್ಷಗಳ ಅವಧಿಗೆ ನೀಡಲಾಗುವುದು~ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನ ಪ್ರತಿಭಾ ಶೋಧ ಪರೀಕ್ಷೆಯು ಮೇ 27 ರಂದು ನಡೆಯಲಿದ್ದು, ಸಂಬಂಧಪಟ್ಟ ಅರ್ಜಿಯನ್ನು ಐಸೆಕ್ ವೆಬ್‌ಸೈಟ್‌ನಿಂದ ಪಡೆದು ಮೇ 5 ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿಯೊಂದಿಗೆ 100 ರೂಪಾಯಿಗಳ ಪೋಸ್ಟಲ್ ಆರ್ಡರ್ ಅನ್ನು `ದಿ ರಿಜಿಸ್ಟ್ರಾರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ನಾಗರಬಾವಿ~ , ಇಲ್ಲಿಗೆ ಕಳುಹಿಸಬೇಕು. ವೆಬ್‌ಸೈಟ್ ವಿಳಾಸ: www.isec.ac.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.