ADVERTISEMENT

ಸಮಾಜ ಸೇವೆಗೆ ಮುಂದಾಗಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: `ಜಾತಿ, ಧರ್ಮ ಹಾಗೂ ಪ್ರದೇಶಗಳ ಎಲ್ಲೆಗಳನ್ನು ಮೀರಿ ಜನರು ಸಮಾಜ ಸೇವೆಗೆ ಮುಂದಾಗಬೇಕು~ ಎಂದು ಸುಮನಹಳ್ಳಿ ಸೊಸೈಟಿಯ ಮುಖ್ಯಸ್ಥೆ ಜಾಕ್ವೆಲಿನ್ ಜೀನ್ ಮಾಕ್‌ಎವನ್ ಕರೆ ನೀಡಿದರು.

ನಗರದಲ್ಲಿ ಗುರುವಾರ ಬೆಂಗಳೂರು ಕಂಟೋನ್ಮೆಂಟ್ ರೋಟರಿ ಕ್ಲಬ್‌ನ 2011-12ನೇ ಸಾಲಿನ `ದಿ ಇಂಟರ್ ನ್ಯಾಷನಲ್ ಗುಡ್‌ವಿಲ್ ಅಂಡ್ ಅಂಡರ್‌ಸ್ಟಾಂಡಿಂಗ್~ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, `ಜನರ ನೋವುಗಳಿಗೆ ಯಾವ ಎಲ್ಲೆಯೂ ಇಲ್ಲ.
 
ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೆಲಸ ಪ್ರಸ್ತುತ ದಿನಗಳಲ್ಲಿ ಅಗತ್ಯ. ನೋವುಂಡ ಜನರಿಗೆ ಸಾಂತ್ವನ ಹೇಳುವ, ದೀನ ದಲಿತರ ಕಷ್ಟಗಳಿಗೆ ಮಿಡಿಯುವ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಬ್ರಿಟನ್‌ನಿಂದ ಬಂದು ಇಲ್ಲಿಯ ಜನರ ಸೇವೆ ಮಾಡಲು ಸ್ಪಂದಿಸಿದ ಎಲ್ಲರಿಗೂ ನಾನು ಕೃತಜ್ಞೆ~ ಎಂದರು.

ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಇಯನ್ ಫೆಲ್ಟನ್ ಮಾತನಾಡಿ, `ಪರಮಾಣು ಒಪ್ಪಂದಗಳಿಗಾಗಿ ಮಾತುಕತೆ ನಡೆಸುವ ದೇಶಗಳು ಮನುಷ್ಯ ಸಂಬಂಧಗಳ ಬಗ್ಗೆ ಗಮನ ನೀಡುತ್ತಿಲ್ಲ. ಮನುಷ್ಯರ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ರಾಷ್ಟ್ರಗಳು ಪ್ರಾಮುಖ್ಯತೆ ನೀಡಬೇಕು.
 
ಬ್ರಿಟನ್‌ನಿಂದ ಬಂದು ಭಾರತದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಜಾಕ್ವೆಲಿನ್ ಜೀನ್ ಮಾಕ್‌ಎವನ್ ಅವರು ಮಾಡಿರುವ ಸಮಾಜ ಸೇವೆಯನ್ನು ಗುರುತಿಸುವ ಉತ್ತಮ ಕೆಲಸವನ್ನು ರೋಟರಿ ಸಂಸ್ಥೆ ಮಾಡಿದೆ. ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸುವುದು ಶ್ರೇಷ್ಠ ಕಾರ್ಯ~ ಎಂದು ನುಡಿದರು.

`ಭಾರತ ಮತ್ತು ಬ್ರಿಟನ್‌ನ ಸಂಬಂಧ ಹಿಂದಿನಿಂದಲೂ ಉತ್ತಮವಾಗಿದೆ. ಭಾರತದ ವಿದ್ಯಾರ್ಥಿಗಳು ಬ್ರಿಟನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಅಂತರ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗೆ ಇದು ಸಹಕಾರಿಯಾಗಿದೆ~ ಎಂದು ಹೇಳಿದರು.

 ಸಮಾರಂಭದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೋಟರಿ ಕ್ಲಬ್‌ನ ಅಧ್ಯಕ್ಷ ವಾಸುದೇವ್ ಎನ್.ಮೂರ್ತಿ, ಕಾರ್ಯದರ್ಶಿ ಜಸ್ಬೀರ್ ಸಿಂಗ್ ದೋಡಿ, ರೋಟರಿ ಅಂತರರಾಷ್ಟ್ರೀಯ ನಿರ್ದೇಶಕ ಭರತ್ ಬಾಯಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.