ADVERTISEMENT

ಸರ್ಕಾರದ ಅನುಮತಿಗೆ ಕಾಯದೇ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 19:30 IST
Last Updated 16 ಜೂನ್ 2012, 19:30 IST

ಬೆಂಗಳೂರು: `ಸರ್ಕಾರದ ಅನುಮತಿಯನ್ನು ನಿರೀಕ್ಷಿಸದೇ ಬಿಬಿಎಂಪಿಯಲ್ಲಿರುವ ಹಣಕಾಸು ಲಭ್ಯತೆ ಆಧರಿಸಿ ಬೃಹತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಹೇಳಿದರು.

ಪ್ರಸಕ್ತ ಸಾಲಿನ ಬಜೆಟ್ ಕುರಿತು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಕಾಮಗಾರಿಗಳಿಗೆ ಮಾತ್ರವೇ ಸರ್ಕಾರದ ಅನುಮೋದನೆಯನ್ನು ಪಡೆಯಲಾಗುವುದು. ಉಳಿದಂತೆ ಪಾಲಿಕೆ ಆರಂಭಿಸುವ ಯೋಜನೆಗಳನ್ನು ಸರ್ಕಾರದ ಅನುಮತಿ ಪಡೆಯದೇ ಆರಂಭಿಸುವ  ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸರ್ಕಾರದಿಂದ ಅನುಮತಿಯನ್ನು ಕೋರಿದ್ದೇವೆ~ ಎಂದು ತಿಳಿಸಿದರು.

`ಪಾಲಿಕೆ ಬಜೆಟ್ ಸಕಾಲದಲ್ಲಿ ಮಂಡನೆಯಾಗದೇ ವಿಳಂಬವಾಗಿರುವುದು ನಿಜ. ಆದರೆ  ಆದಷ್ಟು ಬೇಗ ಇದೇ ತಿಂಗಳಿನಲ್ಲಿ ಬಜೆಟ್ ಮಂಡಿಸಲಾಗುವುದು. ಪಾಲಿಕೆಗೆ ನುರಿತ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಮುಂದಿನ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು, ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು~ ಎಂದು ತಿಳಿಸಿದರು.


`ಎರಡು ವಾರಕ್ಕೊಮ್ಮೆ ಸ್ಥಾಯಿ ಸಮಿತಿಯ ಸಭೆ ಕರೆದು, ವಿಳಂಬಗೊಂಡಿರುವ ಕಡತಗಳನ್ನು ಪರಿಶೀಲನೆ ನಡೆಸುವಂತೆ ಸೂಚಿಸಲಾಗುವುದು. ಪ್ರತಿ ಸೋಮವಾರ ಪಾಲಿಕೆಯ ಹಿರಿಯ ಎಂಜಿನಿಯರ್‌ಗಳ ಸಭೆ ಕರೆದು, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು~ ಎಂದು ಹೇಳಿದರು.

 `ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು  ಕೋರಿ ಸದ್ಯದಲ್ಲೇ ನಿಯೋಗವೊಂದನ್ನು ಮುಖ್ಯಮಂತ್ರಿ ಬಳಿಗೆ ಕೊಂಡೊಯ್ಯಲಾಗುವುದು. ಎಂದರು.

ಪಾಲಿಕೆಯ ಕಡತದಲ್ಲಿನ ಅಂಕಿ ಅಂಶಗಳ ಪ್ರಕಾರ ನಗರದಲ್ಲಿ ಕೇವಲ ಎರಡು ಸಾವಿರ ಅಪಾರ್ಟ್‌ಮೆಂಟ್‌ಗಳಿವೆ. ಆದರೆ ವಾಸ್ತವವಾಗಿ 32 ಸಾವಿರಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ಪಾಲಿಕೆ ಕಡತದಲ್ಲಿನ ಅಂಕಿ ಅಂಶಗಳನ್ನು ಮರು ಪರಿಶೀಲನೆಗೆ ಒಳಪಡಿಸಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ` ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಉಪಮೇಯರ್ ಎಲ್.ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್ ಇತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT