ADVERTISEMENT

ಸರ್ಕಾರದ ನೀತಿ ಬಡವರ ಪರವಿರಲಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:49 IST
Last Updated 14 ಅಕ್ಟೋಬರ್ 2017, 19:49 IST
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಉಪ ಮೇಯರ್ ಜಿ.ಪದ್ಮಾವತಿ, ಎಚ್.ಡಿ.ದೇವೇಗೌಡ, ಆರ್.ಕೃಷ್ಣಮೂರ್ತಿ, ಕಾಸಿಯಾ ಸಂಘದ ಅಧ್ಯಕ್ಷ ಹನುಮಂತೇಗೌಡ ಇದ್ದಾರೆ
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಉಪ ಮೇಯರ್ ಜಿ.ಪದ್ಮಾವತಿ, ಎಚ್.ಡಿ.ದೇವೇಗೌಡ, ಆರ್.ಕೃಷ್ಣಮೂರ್ತಿ, ಕಾಸಿಯಾ ಸಂಘದ ಅಧ್ಯಕ್ಷ ಹನುಮಂತೇಗೌಡ ಇದ್ದಾರೆ   

ಬೆಂಗಳೂರು: ಸರ್ಕಾರಗಳು ಬದಲಾದಂತೆ ಕೈಗಾರಿಕಾ ನೀತಿಗಳು ಬದಲಾಗುತ್ತಿದೆ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೋದ್ಯಮ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತಿವೆ ಎಂದು ಸಂಸದ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರಪಟ್ಟರು.

ಪೀಣ್ಯ ಕೈಗಾರಿಕಾ ವಸಾಹತುವಿನಲ್ಲಿ ಪೀಣ್ಯ ಕೈಗಾರಿಕಾ ಸಂಘ ಶನಿವಾರ ಆಯೋಜಿಸಿದ್ದ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಸರ್ಕಾರವಾದರೂ ಮೊದಲ ಪ್ರಾಶಸ್ತ್ಯ ಬಡವನಿಗೆ ನೀಡಬೇಕು. ನೀತಿ, ನಿಲುವುಗಳು ಬಡವರ ಪರವಾಗಿರಬೇಕು, ಆದರೆ ನೀತಿ ದೊಡ್ಡ ಉದ್ಯಮಿಗಳ ಪರವಾಗಿದೆ. ಬೃಹತ್ ಮೊತ್ತದ ಸಾಲ ಪಡೆದಿರುವ ಹಲವು ಉದ್ದಿಮೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೂ ಬ್ಯಾಂಕ್ ನೀಡಿದ ಸಾಲದ ಹಣ ವಸೂಲಿ ಸಾಧ್ಯವಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ತಮ್ಮ ಅಧಿಕಾರವಧಿಯಲ್ಲಿ ಐ.ಟಿ ಪಾರ್ಕ್‌ ಸೇರಿ ಹಲವು ಮಹತ್ವದ ಯೋಜನೆಗಳು ರಾಜ್ಯಕ್ಕೆ ಒದಗಿ ಬಂದವು. ಇವುಗಳನ್ನು ಜನತೆಗೆ ತಿಳಿಸುವ ಕಾಲ ಸನ್ನಿಹಿತವಾಗಿದೆ. ನವೆಂಬರ್‌ನಲ್ಲಿ ಪಕ್ಷ ಸಾಧನೆಯ ಹೊತ್ತಿಗೆ ಬಿಡುಗಡೆಗೊಳಿಸಲಾಗುವುದು’ ಎಂದು ತಿಳಿಸಿದರು.

ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, ‘ಕೈಗಾರಿಕೆಗೂ ಕೃಷಿಯಷ್ಟೇ ಆದ್ಯತೆ ನೀಡಬೇಕು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ಲಕ್ಷಾಂತರ ಜನರು ಜೀವನ ಕಟ್ಟಿಕೊಂಡಿದ್ದಾರೆ. ದುರದೃಷ್ಟವಶಾತ್ ರಾಷ್ಟ್ರದಲ್ಲಿ ಕೈಗಾರಿಕೆಯನ್ನು ಈವರೆಗೂ ಕಡೆಗಣಿಸಲಾಗುತ್ತಿದೆ’ ಎಂದು ವಿಷಾದಿಸಿದರು.

ಸಂಕಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೇವೇಗೌಡರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.