ADVERTISEMENT

ಸರ್ಕಾರಿ ನೌಕರರ ಸಂಘದ ಏಷ್ಯಾ ವಲಯದ ಸಭೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘವು ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಬುಧವಾರ ಮತ್ತು ಗುರುವಾರ ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಏಷ್ಯಾ ಫೆಸಿಫಿಕ್ ವಲಯದ ಕಾರ್ಯಕಾರಿ ಸಭೆಯನ್ನು ಹಮ್ಮಿಕೊಂಡಿದೆ.

ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿರುವ ಮಲೇಷ್ಯಾ, ಸಿಂಗಪುರ, ಥ್ಯಾಯ್ಲೆಂಡ್. ಫಿಲಿಫಿನ್ಸ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶದ ಸರ್ಕಾರಿ ನೌಕರರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗುಣಾತ್ಮಕ ಸಾರ್ವಜನಿಕ ಸೇವೆ, ವಿಶ್ವದ ಬಡತನ ನಿರ್ಮೂಲನೆ, ಆರೋಗ್ಯ, ಪರಿಸರ ಸಂರಕ್ಷಣೆ,  ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಲ್.ಬೈರಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ಶೇ 22.5 ರಷ್ಟು ವೇತನ ಹೆಚ್ಚಳ ಮಾಡಿದ್ದು, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಏಪ್ರಿಲ್ 1 ರಿಂದ ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ ಈ ವರೆಗೆ ಇದು ಜಾರಿಯಾಗಿಲ್ಲ ಎಂದು ಹೇಳಿದರು.

ವೇತನ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆ ವರದಿಯಲ್ಲಿರುವ ಸಾಕಷ್ಟು ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಸರ್ಕಾರಿ ನೌಕರರಿಗೆ ನಗರ ಪರಿಹಾರ ಭತ್ಯೆಯಾಗಿ 400 ರೂಪಾಯಿ ನೀಡಲಾಗುತ್ತಿದೆ. ಬಸ್ ಪಾಸ್ ದರಕ್ಕೆ ಅನುಗುಣವಾಗಿ ಇದನ್ನು 700ರೂಪಾಯಿಗೆ ಏರಿಸಬೇಕು.

ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಈಚೆಗಷ್ಟೆ ಚರ್ಚೆ ನಡೆಸಲಾಗಿದ್ದು ಈವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.ಸರ್ಕಾರ ಮುಂದಿನ ವಾರದೊಳಗೆ ನಿರ್ಧಾರ ಪ್ರಕಟಿಸದಿದ್ದರೆ, ಸಂಘದ ಕಾರ್ಯಕಾರಿ ಸಭೆ ಸೇರಿ, ಹೋರಾಟದ ರೂಪು ರೇಷೆಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.