ಬೆಂಗಳೂರು: ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಎಸ್.ಪಿ.ಮಹಾಂತೇಶ್ ಕೊಲೆ ನಡೆದ ಅರಮನೆ ರಸ್ತೆಯ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಏಟ್ರಿಯಾ ಹೋಟೆಲ್‌ಗೆ ಘಟನೆ ನಡೆದ ದಿನ ಬಂದಿದ್ದ ಯುವಕನೊಬ್ಬ ನೀಡಿದ ಸಣ್ಣ ಸುಳಿವು ಪ್ರಕರಣದ ತನಿಖಾಧಿಕಾರಿಗಳನ್ನು ಆರೋಪಿಗಳ ಮನೆ ಬಾಗಿಲಿಗೆ ತಂದು ನಿಲ್ಲಿಸಿತು.
ಮಹಾಂತೇಶ್ ಮೇಲೆ ಮೇ 15ರಂದು ರಾತ್ರಿ ಹಲ್ಲೆ ನಡೆದಿದ್ದ ಸಂದರ್ಭದಲ್ಲಿ ಏಟ್ರಿಯಾ ಹೋಟೆಲ್‌ನಲ್ಲಿ ಖಾಸಗಿ ಕಂಪೆನಿಯೊಂದರ ಸಮಾರಂಭ ಏರ್ಪಡಾಗಿತ್ತು. ಆ ಕಂಪೆನಿಯ ಮಹಿಳಾ ಉದ್ಯೋಗಿಯೊಬ್ಬರು ಸಮಾರಂಭಕ್ಕೆ ಬಂದಿದ್ದರು. ಆ ಉದ್ಯೋಗಿಯನ್ನು ಕರೆದೊಯ್ಯಲು ಅವರ ಪ್ರಿಯಕರ ಸುನಿಲ್ (ಹೆಸರು ಬದಲಿಸಿದೆ) ಎಂಬುವರು ಬೈಕ್‌ನಲ್ಲಿ ಹೋಟೆಲ್‌ಗೆ ಬರುತ್ತಿದ್ದಾಗ ಅರಮನೆ ರಸ್ತೆಯಲ್ಲಿ ನಾಲ್ಕು ಮಂದಿ ಅಪರಿಚಿತರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ನೋಡಿ, ಆ ಬಗ್ಗೆ ಹೋಟೆಲ್‌ನ ಸೆಕ್ಯುರಿಟಿ ಗಾರ್ಡ್‌ಗೆ ಮಾಹಿತಿ ನೀಡಿದ್ದರು.
ಬಳಿಕ ಸುನಿಲ್ ಅವರು ಹೋಟೆಲ್‌ನ ವಾಹನ ನಿಲುಗಡೆ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಒಳಗೆ ಹೋಗಿದ್ದರು. ಸೆಕ್ಯುರಿಟಿ ಗಾರ್ಡ್, ಸುನಿಲ್‌ರ ಬೈಕ್‌ನ ನೋಂದಣಿ ಸಂಖ್ಯೆಯನ್ನು ವಾಹನಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಿಕೊಂಡಿದ್ದರು. ನಂತರ ಆ ಸೆಕ್ಯುರಿಟಿ ಗಾರ್ಡ್ ಅರಮನೆ ರಸ್ತೆಗೆ ಬಂದಾಗ, ವ್ಯಕ್ತಿಯೊಬ್ಬರು ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು.
`ಆ ಸೆಕ್ಯುರಿಟಿ ಗಾರ್ಡ್‌ನ ವಿಚಾರಣೆ ನಡೆಸಿದಾಗ, ಘಟನೆಯ ಬಗ್ಗೆ ಅವರಿಗೆ ಮೊದಲು ಮಾಹಿತಿ ನೀಡಿದ್ದ ಯುವಕ ಮತ್ತು ಆತನ ಬೈಕ್‌ನ ನೋಂದಣಿ ಸಂಖ್ಯೆಯ ವಿವರಗಳನ್ನು ನೀಡಿದರು. ಆ ವಿವರಗಳನ್ನು ಆಧರಿಸಿ ಘಟನೆಯ ಪ್ರತ್ಯಕ್ಷದರ್ಶಿ ಅಂದರೆ ಸುನಿಲ್‌ರ ವಿಳಾಸವನ್ನು ಪತ್ತೆ ಮಾಡಲಾಯಿತು~ ಎಂದು ತನಿಖಾಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.
`ಸುನಿಲ್ ಅವರ ವಿಚಾರಣೆ ನಡೆಸಿದಾಗ, ಹಲ್ಲೆ ನಡೆಸುತ್ತಿದ್ದ ವ್ಯಕ್ತಿಗಳು ಹಳದಿ ನೋಂದಣಿ ಫಲಕವಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದಿದ್ದರು ಎಂದು ಮಾಹಿತಿ ನೀಡಿದರು. ಅರಮನೆ ರಸ್ತೆಯಲ್ಲಿನ ಸಿ.ಸಿ ಕ್ಯಾಮೆರಾದಲ್ಲಿ ಘಟನೆ ನಡೆದ ಸಮಯದ ಆಸುಪಾಸಿನಲ್ಲಿ ದಾಖಲಾಗಿದ್ದ ಕಾರಿನ ದೃಶ್ಯಾವಳಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಅಹಮದಾಬಾದ್ ಮತ್ತು ಇಂಗ್ಲೆಂಡ್‌ನ ವೈಜ್ಞಾನಿಕ ಸಂಶೋಧನಾಲಯಗಳಿಗೆ ಕಳುಹಿಸಲಾಗಿತ್ತು.
ಆ ಸಂಶೋಧನಾಲಯಗಳ ತಜ್ಞರು ಕಾರಿನ ನೋಂದಣಿ ಸಂಖ್ಯೆ ಹಾಗೂ ವಾಹನದ ಲಕ್ಷಣಗಳನ್ನು ಗುರುತಿಸಿ ವರದಿ ನೀಡಿದರು. ಆ ವರದಿಯಲ್ಲಿದ್ದ ಅಂಶಗಳು ಮತ್ತು ಸುನಿಲ್ ಕೊಟ್ಟಿದ್ದ ಕಾರಿನ ವಿವರಕ್ಕೂ ಸಾಮ್ಯತೆ ಇತ್ತು. ಈ ಅಂಶ ಪ್ರಕರಣದ ಪತ್ತೆಗೆ ಪೂರಕವಾಯಿತು~ ಎಂದು ತನಿಖಾಧಿಕಾರಿಗಳು ಹೇಳಿದರು.
ಗೈರು ಹಾಜರಿ: ಮಹಾಂತೇಶ್ ಇತ್ತೀಚೆಗೆ ಸಹಕಾರನಗರ ಪತ್ತಿನ ಸಹಕಾರ ಸಂಘದ ಲೆಕ್ಕ ಪರಿಶೀಲನೆ ನಡೆಸುತ್ತಿದ್ದ ಬಗ್ಗೆ ಅವರ ಸಹೋದ್ಯೋಗಿಗಳು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ದಿಕ್ಕಿನಲ್ಲಿ ತನಿಖೆ ಆರಂಭಿಸಿದ ಪೊಲೀಸರು ಮೇ 30ರಂದು ಆ ಸಂಘಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ವಿಚಾರಣೆ ನಡೆಸಿದಾಗ, ಸಂಘದ ಕ್ಯಾಷಿಯರ್ ಕಿರಣ್‌ಕುಮಾರ್ ಹಣ ದುರ್ಬಳಕೆ ಮಾಡಿಕೊಂಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.
ಪೊಲೀಸರು ಸಂಘದ ಕಚೇರಿಗೆ ಬಂದು ಹೋದ ನಂತರ ಕಿರಣ್‌ಕುಮಾರ್ ಕೆಲಸಕ್ಕೆ ಗೈರು ಹಾಜರಾಗಿದ್ದ. ಪೊಲೀಸರು ಜೂ.2ರಂದು ಪುನಃ ಆ ಸಂಘದ ಕಚೇರಿಗೆ ಹೋದಾಗ ಕಿರಣ್‌ಕುಮಾರ್ ಕೆಲಸಕ್ಕೆ ಗೈರು ಹಾಜರಾಗಿರುವುದು ಹಾಗೂ ತನ್ನ ಮನೆಗೂ ಹೋಗದಿರುವುದು ಗೊತ್ತಾಯಿತು. ಇದರಿಂದ ಕಿರಣ್‌ಕುಮಾರ್ ಬಗ್ಗೆ ಅನುಮಾನಗೊಂಡ ಪೊಲೀಸರು ಆತನ ಮೊಬೈಲ್ ಕರೆ ಮತ್ತು ಚಲನವಲನಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಪ್ರಕರಣ ಬೆಳಕಿಗೆ ಬಂತು.
ಇದಕ್ಕೂ ಮುನ್ನ ತನಿಖಾಧಿಕಾರಿಗಳು, ಮಹಾಂತೇಶ್ ಪತ್ನಿ ಪೂರ್ಣಿಮಾ ಮತ್ತು ಅವರ ಸಂಬಂಧಿಕರ ನಡುವಿನ ಆಸ್ತಿ ವಿವಾದ, ವೃತ್ತಿ ವೈಷಮ್ಯ, ವೈಯಕ್ತಿಕ ಬದುಕು, ಕೌಟುಂಬಿಕ ಹಿನ್ನೆಲೆ ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಈ ಅಂಶಗಳು ಕೊಲೆಗೆ ಕಾರಣವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.