ADVERTISEMENT

ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 10 ವರ್ಷ ಜೈಲು ಶಿಕ್ಷೆ, ದಂಡ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:10 IST
Last Updated 4 ಏಪ್ರಿಲ್ 2018, 20:10 IST

ಬೆಂಗಳೂರು: ಮಾದಕವಸ್ತು ಮಾರಾಟ ಮಾಡುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ವೆಂಕಟ್ ಸುಬ್ರಹ್ಮಣ್ಯನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.85 ಲಕ್ಷ ದಂಡ ವಿಧಿಸಿ ನಗರದ ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

2015ರ ಜೂನ್‌ 23ರಂದು ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ.ವೈ.ಬಸಾಪುರ, ಈ ಆದೇಶ ಹೊರಡಿಸಿದರು. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಒಂದು ವರ್ಷ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಹೇಳಿದ್ದಾರೆ.

ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದ ನಂತರ ಬೆಂಗಳೂರಿಗೆ ಬಂದಿದ್ದ ಅಪರಾಧಿ, ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆತ ಮಾದಕ ವ್ಯಸನಿಯೂ ಆಗಿದ್ದ. ಹೀಗಾಗಿ ಆತನಿಗೆ ಹೊರ ದೇಶಗಳ ಮಾದಕ ವಸ್ತು ಮಾರಾಟಗಾರರ ಪರಿಚಯವಾಗಿತ್ತು. ಅವರಿಂದ ಮಾದಕ ವಸ್ತು ಖರೀದಿಸಿ, ಬೆಂಗಳೂರು ಹಾಗೂ ಕೊಡೈಕೆನಾಲ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸರಬರಾಜು ಮಾಡಿ, ಹಣ ಸಂಪಾದಿಸುತ್ತಿದ್ದ ಎಂದು ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಮೂಲಗಳು ತಿಳಿಸಿವೆ.

ADVERTISEMENT

ವ್ಯಕ್ತಿಯೊಬ್ಬರು ನೀಡಿದ್ದ ಮಾಹಿತಿಯಂತೆ ವಿಜ್ಞಾನ ನಗರದಲ್ಲಿರುವ ಅಪರಾಧಿಯ ಮನೆ ಮೇಲೆ ದಾಳಿ ಮಾಡಿದ್ದೆವು. ಈ ವೇಳೆ 0.92 ಗ್ರಾಂ ಎಲ್‌ಎಸ್‌ಡಿ, 3.4 ಗ್ರಾಂ ಕೊಕೇನ್, 0.52 ಗ್ರಾಂ ಎಂಡಿಎಂಎ, 40 ಗ್ರಾಂ ಗಾಂಜಾ ಸಿಕ್ಕಿತ್ತು. ಅದರ ಮೌಲ್ಯ ₹3.45 ಲಕ್ಷ. ವೆಂಕಟ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೆವು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.