ADVERTISEMENT

ಸಾಫ್ಟ್‌ವೇರ್ ಎಂಜಿನಿಯರ್ ಬಂಧನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ಬಿಎಂಟಿಸಿಯ ವೊಲ್ವೊ ಬಸ್‌ಗಳಲ್ಲಿ ಟಚ್ ಸ್ಕ್ರೀನ್ ಟ್ಯಾಬ್ಲೆಟ್ ಕಳವು ಮಾಡುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಬಸ್‌ನ ಸಿಬ್ಬಂದಿಯೇ ಹಿಡಿದು ಉಪ್ಪಾರಪೇಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಆಂಧ್ರ ಮೂಲದ ಸಾಗರ್‌ರೆಡ್ಡಿ (32) ಆರೋಪಿ. ಮತ್ತೀಕೆರೆ ಸಮೀಪದ ಚಿಕ್ಕಮಾರನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆತ ಸಿ.ವಿ.ರಾಮನ್ ನಗರ ಸಮೀಪದ    ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆತ ಸಾಫ್ಟ್‌ವೇರ್ ಕಂಪೆನಿಯೊಂದರ ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಮಧ್ಯಾಹ್ನ ಬೊಮ್ಮನಹಳ್ಳಿಗೆ ಬಂದಿದ್ದ. ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ  ಬಿಎಂಟಿಸಿಯ ವೊಲ್ವೊ ಬಸ್‌ನಲ್ಲಿ (ಮಾರ್ಗ ಸಂಖ್ಯೆ- 356ಸಿ) ಮೆಜೆಸ್ಟಿಕ್‌ಗೆ ಬರುತ್ತಿದ್ದ ವೇಳೆ, ವಾಹನದ ಸೀಟಿನ ಹಿಂಬದಿಯಲ್ಲಿ ಅಳವಡಿಸಿದ್ದ ಟಚ್ ಸ್ಕ್ರೀನ್ ಟ್ಯಾಬ್ಲೆಟ್ ಕಳವು ಮಾಡಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ. ಬಸ್ ಮೆಜೆಸ್ಟಿಕ್ ತಲುಪುತ್ತಿದ್ದಂತೆ ಆತ ವಾಹನದಿಂದ ಕೆಳಗಿಳಿಯುವ ಯತ್ನದಲ್ಲಿದ್ದ. ಬಸ್‌ನ ನಿರ್ವಾಹಕ ಮಹಾಂತೇಶ್, ಆರೋಪಿ ಸಾಗರ್ ರೆಡ್ಡಿ ಕುಳಿತಿದ್ದ ಸೀಟಿನ ಬಳಿ ಹೋಗಿ ನೋಡಿದಾಗ ಟಚ್ ಸ್ಕ್ರೀನ್ ಟ್ಯಾಬ್ಲೆಟ್ ಇಲ್ಲದಿರುವುದು ಗೊತ್ತಾಯಿತು. ಇದರಿಂದ ಅನುಮಾನಗೊಂಡ ಮಹಾಂತೇಶ್, ಸಾಗರ್ ರೆಡ್ಡಿಯನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಬಸ್‌ನ ಸಿಬ್ಬಂದಿ ಆರೋಪಿಯನ್ನು ಠಾಣೆಗೆ ಕರೆತಂದರು. ಸಾಗರ್‌ರೆಡ್ಡಿ ವಿರುದ್ಧ ಕಳವು ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಬುಧವಾರ ಬೆಳಿಗ್ಗೆ ನಗರದ ಒಂಬತ್ತನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ಬಳಿಕ ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ  ನೀಡಿದ್ದಾರೆ.

ಘಟನೆ ಸಂಬಂಧ ಬಸ್‌ನ ಚಾಲಕ ಆನಂದ್‌ಬಾಬು ದೂರು ಕೊಟ್ಟಿದ್ದಾರೆ. ಸಾಗರ್‌ರೆಡ್ಡಿ ಕಳವು ಮಾಡಿದ್ದ ಟಚ್ ಸ್ಕ್ರೀನ್ ಟ್ಯಾಬ್ಲೆಟ್‌ನ ಬೆಲೆ ಸುಮಾರು 15 ಸಾವಿರ ರೂಪಾಯಿ ಎಂದು ಆನಂದ್‌ಬಾಬು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.