ADVERTISEMENT

ಸಾಮಾಜಿಕ ಬದಲಾವಣೆ: ಹೋರಾಟ ಅಗತ್ಯ

ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:45 IST
Last Updated 10 ಡಿಸೆಂಬರ್ 2013, 19:45 IST

ಬೆಂಗಳೂರು: ‘ಸಮಾಜದಲ್ಲಿ ಕಾನೂನಿನ ಚೌಕಟ್ಟಿ ನಲ್ಲೇ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.

ನಿಡುಮಾಮಿಡಿ ಮಠ ಮತ್ತು ಮಾನವಧರ್ಮ ಪೀಠವು ನಗರದ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ  ಮಂಗಳವಾರ  ಏರ್ಪಡಿಸಿದ್ದ ‘ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ಅಧಿಕಾರಿಗಳು ಮಾನವೀಯತೆಯನ್ನೇ ಮರೆತವರಂತೆ  ವರ್ತಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಲಂಚ ತೆಗೆದುಕೊಳ್ಳುವ ಸಿಬ್ಬಂದಿಗಳಿದ್ದಾರೆ. ಸಮಾಜದಲ್ಲಿ ಸಂಪತ್ತು, ಅಧಿಕಾರಕ್ಕೆ ಬೆಲೆ ಸಿಗುತ್ತಿದೆಯೇ ಹೊರತು ಪ್ರಾಮಾಣಿಕತೆಗೆ ಬೆಲೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿನ ಶಿಕ್ಷಣದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಈ ಕೆಟ್ಟ ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಸಾಮಾಜಿಕ ಹೋರಾಟ ಅಗತ್ಯ ಎಂದು ಹೇಳಿದರು.

ಲೇಖಕಿ ಬಾನು ಮುಷ್ತಾಕ್ ಮಾತನಾಡಿ, ಸಾಧನೆಯ ಹಾದಿ ತುಂಬಾ ಸವಾಲಿನದು. ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ ನರೇಂದ್ರ ದಾಭೋಲಕರ್‌ ಕೊಲೆಯಾಗುತ್ತಾರೆ. ಸಮಾಜದ ಸ್ವಾಸ್ಥ್ಯ ಬಯಸದ ಕೆಲವು ಹಿತಾಸಕ್ತಿಗಳು ಮೂಢನಂಬಿಕೆ ನಿಷೇಧವನ್ನು ವಿರೋಧಿಸುತ್ತಿವೆ. ಬೆಳೆ ಮತ್ತು ಕಳೆಯನ್ನು ಗುರುತಿಸುವ ಪ್ರಜ್ಞಾವಂತಿಕೆಯನ್ನು ಸಮಾಜದಲ್ಲಿ ಬೆಳೆಸಬೇಕಾದ ಅಗತ್ಯವಿದೆ ಎಂದರು.

ಸಂವಿಧಾನವು ಜೀವಿಸುವ ಹಕ್ಕನ್ನು ನೀಡಿದೆ. ಆದರೆ, ಹೆಣ್ಣು ಭ್ರೂಣಹತ್ಯೆ ಮಾಡುವ ಮೂಲಕ ಹೆಣ್ಣುಮಕ್ಕಳ ಜೀವಿಸುವ ಹಕ್ಕನ್ನೇ ಕಿತ್ತುಕೊಳ್ಳಲಾಗುತ್ತಿದೆ. ಆರ್‌ಟಿಐ ಕಾರ್ಯಕರ್ತರನ್ನು ಹತ್ಯೆಗೀಡಾದಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಸಹ ಹತ್ಯೆಗೊಳಗಾಗುತ್ತಿದ್ದಾರೆ. ಆದ್ದರಿಂದ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಶಾಸಕಾಂಗ, ಕಾರ್ಯಾಂಗಗಳು ಬಡವರ ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳದಿದ್ದರೆ ಜನಸಾಮಾನ್ಯರು  ಪ್ರಜಾಪ್ರಭುತ್ವದ ಮೇಲಿನ ಭರವಸೆ ಕಳೆದುಕೊಳ್ಳುತ್ತಾರೆ. ಹಲವು ತಿಂಗಳುಗಳಿಂದ ರಾಜ್ಯ ಮಾನವ ಹಕ್ಕುಗಳ ಆಯೋಗದ ಆಧ್ಯಕ್ಷ ಹುದ್ದೆ ಖಾಲಿ ಇದೆ. ಸರ್ಕಾರ ಕೂಡಲೆ ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಪುರುಷೋತ್ತಮ ಪೂಜಾರಿ, ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿಯೊಂದು ವೃತ್ತಿಗೂ ಅದರದೆ ಆದ ಗೌರವವಿದೆ. ವೃತ್ತಿ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಶೋಷಣೆಗೆ ಒಳಗಾದವರ ನೆರವಿಗೆ ಧಾವಿಸಬೇಕು ಎಂದರು.

ಮಂಗಳೂರಿನ ಹಿರಿಯ ವಕೀಲ ಪುರುಷೋತ್ತಮ ಪೂಜಾರಿ ಮತ್ತು ಶಿವಮೊಗ್ಗದ ಸಮಾಜಸೇವಕ ಹಿರೇಹಾಳು ಇಬ್ರಾಹಿಂ ಸಾಹೇಬ ಅವರಿಗೆ ‘ಮಾನವತಾ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.