ADVERTISEMENT

ಸಾಮಾಜಿಕ, ಸಾಂಸ್ಕೃತಿಕವಾಗಿ ಶಾಸನಗಳ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಬೆಂಗಳೂರು: `ಶಾಸನಗಳು ನಮ್ಮ ನೆಲದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಜೊತೆಗೆ ನೇರ ಸಂಬಂಧ ಹೊಂದಿರುವಂಥವು~ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದರು.
ನಗರದಲ್ಲಿ ಗುರುವಾರ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಡಾ.ಎನ್.ಆರ್.ಲಲಿತಾಂಬ ಅವರ `ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ ಸಂಚಲನ~ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ಶಾಸನಗಳು ಕೇವಲ ಇತಿಹಾಸದ ಅಧ್ಯಯನಕ್ಕೆ ಮಾತ್ರ ಸಂಬಂಧ ಪಟ್ಟಿರುವ ವಿಷಯ ಎಂಬ ಮನಸ್ಥಿತಿ ಇಲ್ಲಿಯವರೆಗೂ ಬೆಳೆದುಬಂದಿದೆ. ಆದರೆ ಶಾಸನಗಳು ಪ್ರಾದೇಶಿಕ ಸಂಸ್ಕೃತಿಯ ಜೊತೆಗೆ ತಳಕು ಹಾಕಿಕೊಂಡಿವೆ. ಹೀಗಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದಿಂದ ಶಾಸನಗಳ ಅಧ್ಯಯನ ನಡೆಯಬೇಕಿದೆ. ಅಂತಹ ಅಧ್ಯಯನಕ್ಕೆ ಪ್ರಸ್ತುತ ಕೃತಿ ಸ್ಪೂರ್ತಿದಾಯಕವಾಗಿದೆ~ ಎಂದು ಅವರು ನುಡಿದರು.

`ಪ್ರಸ್ತುತ ಕೃತಿಯಲ್ಲಿ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳೊಂದಿಗೆ ಭಾಷಾ ವಿಜ್ಞಾನದ ಅಂತರ್ ಶಿಸ್ತಿಯ ಅಧ್ಯಯನವೂ ನಡೆದಿದೆ. ಅರಸೀಕೆರೆ ತಾಲ್ಲೂಕಿನ ಶಾಸನಗಳನ್ನೇ ಕೇಂದ್ರವಾಗಿಟ್ಟುಕೊಂಡರೂ ಅದರೊಂದಿಗೆ ಇಡೀ ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡಲು ಈ ಅಧ್ಯಯನ ಪ್ರಯತ್ನಿಸಿದೆ. ಹೀಗಾಗಿ ಡಾ.ಎನ್.ಆರ್.ಲಲಿತಾಂಬ ಅವರ ಈ ಸಂಶೊಧನೆ ಮಹತ್ವ ಪೂರ್ಣವಾದುದು.
 
ಮಹಿಳೆ ಎಂಬ ಮಿತಿಯನ್ನೂ ಮೀರಿ ಅವರು ಕ್ಷೇತ್ರ ಕಾರ್ಯ ಮಾಡಿರುವುದು ಶ್ಲಾಘನೀಯ. ಜ್ಞಾನಕ್ಕೆ ಪುರುಷ - ಮಹಿಳೆ ಎಂಬ ಭೇದವಿಲ್ಲ~ ಎಂದು ಅವರು ಅಭಿಪ್ರಾಯ ಪಟ್ಟರು.

`ಸಂಶೋಧನಾ ಕ್ಷೇತ್ರದ ಆರಂಭಕ್ಕೆ ಪಿಎಚ್.ಡಿ ಪದವಿಗಳು ಮುನ್ನುಡಿಯಾಗಬೇಕು. ಆದರೆ ಬಹಳಷ್ಟು ಜನ ಸಂಶೋಧಕರು ಎನಿಸಿಕೊಂಡವರು ತಮ್ಮ ಹೆಸರಿನ ಮುಂದೆ ಎಂ.ಎ, ಪಿಎಚ್.ಡಿ ಗಳಿಗಾಗಿ ಅಷ್ಟೇ ಪಿಎಚ್.ಡಿ ಪದವಿಗಳನ್ನು ಪಡೆಯುತ್ತಾರೆ. ಇಂಥವರ ಹೆಸರಿನ ಮುಂದೆ ಡಾಕ್ಟರ್ ಹಾಗೂ ಎಂ.ಎ, ಪಿಎಚ್.ಡಿಗಳನ್ನು ತೆಗೆದು ಎಮ್ಮೆಯ ಕೊಂಬುಗಳನ್ನು ಇಡಬೇಕು~ ಎಂದು ಅವರು ವ್ಯಂಗ್ಯವಾಡಿದರು.

ಶಾಸನ ಸಂಶೋಧಕ ಡಾ.ಪಿ.ವಿ.ಕೃಷ್ಣಮೂರ್ತಿ ಕೃತಿ ಪರಿಚಯಿಸಿದರು. ಕೃತಿಯ ಲೇಖಕಿ ಡಾ.ಎನ್.ಆರ್.ಲಲಿತಾಂಬ, ಹಿರಿಯ ಶಾಸನ ಸಂಶೋಧಕಿ ಜ್ಯೋತ್ಸ್ನಾ ಕಾಮತ್, ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಎಂ.ಬೈರೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.