ADVERTISEMENT

ಸಾರ್ವಜನಿಕರ ಹಣ ಪೋಲು: ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 20:18 IST
Last Updated 16 ಜುಲೈ 2013, 20:18 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಉಪ ಆಯುಕ್ತರಾಗಿದ್ದ ಸಿ. ತ್ಯಾಗರಾಜ್ ಅವರನ್ನು ಪಾಲಿಕೆಯ ಆಯುಕ್ತರ ಸಲಹೆಗಾರ ಸ್ಥಾನಕ್ಕೆ ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ತ್ಯಾಗರಾಜ್ ಅವರು ಕರ್ತವ್ಯದಿಂದ ನಿವೃತ್ತರಾದ ಮಾರನೆಯ ದಿನವೇ ಅವರನ್ನು ಸಲಹೆಗಾರ ಹುದ್ದೆಗೆ ನೇಮಕ ಮಾಡಲಾಗಿದೆ. ಇದು ಕರ್ನಾಟಕ ಪೌರಾಡಳಿತ ಸಂಸ್ಥೆಗಳ ಕಾಯ್ದೆ ನಿಯಮ 20(ಬಿ)ಯ ಉಲ್ಲಂಘನೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇದರ ವಿಚಾರಣೆಯನ್ನು ಮಂಗಳವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, `ಇಂಥ ಅಕ್ರಮ ನೇಮಕಾತಿ ಮೂಲಕ ಸಾರ್ವಜನಿಕರ ಹಣ ಹಾಳು ಮಾಡುವುದು ತಪ್ಪು. ಈ ನೇಮಕಾತಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೂ ಒಪ್ಪಿಗೆ ನೀಡಿದ್ದಾರಾ? ಹಾಗಾದರೆ ಅವರ ವಿರುದ್ಧವೂ ಕಟು ಶಬ್ದಗಳನ್ನು ಬಳಸಿ ಆದೇಶ ಬರೆಯಬೇಕಾಗುತ್ತದೆ' ಎಂದು ಸರ್ಕಾರವನ್ನು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು. ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿರುವ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.