ADVERTISEMENT

ಸಾಹಿತಿಗೆ ರಾಜಕೀಯ ಪ್ರಜ್ಞೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಬೆಂಗಳೂರು: ಈ ಹಿಂದಿನ ಸಾಹಿತಿಗಳಲ್ಲಿ ಸೈದ್ಧಾಂತಿಕ ಸಂಘರ್ಷ­ವಿದ್ದರೂ ವ್ಯಕ್ತಿ ಭೇದವಿರಲಿಲ್ಲ ಎಂದು ಕವಿ ಡಾ.ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪ­ಡಿಸಿದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತು ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಹೊತ್ತು ಬರಹಗಾರರ ನಡುವೆ  ವೈಮನಸ್ಸಿದ್ದು ಸಮನ್ವಯದ ಅಗತ್ಯವಿದೆ. ಪ್ರಭುತ್ವ ಮತ್ತು ಪ್ರತಿಭೆಯ ನಡುವಿನ ಸಂಘರ್ಷ ಯಾವತ್ತಿಗೂ ಜೀವಂತವಾಗಿರುತ್ತದೆ.  ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರತಿನಿಧಿಗಳಾದ ಸಾಹಿತಿಗಳಿಗೆ ರಾಜಕೀಯ ಪ್ರಜ್ಞೆ ಇರಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗ­ವಾಗಿ ನವೋದಯದಿಂದ ಈವರೆಗಿನ ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಕುರಿತ 17 ಸಂಪುಟಗಳನ್ನು ಹೊರ­ತರಲಾಗುತ್ತಿದೆ.  ಶತಮಾನೋತ್ಸವ ಭವನ ನಿರ್ಮಾಣಕ್ಕೆ ಈ ಹಿಂದೆ ಘೋಷಿಸಿದ್ದಂತೆ  ₨ 5 ಕೋಟಿ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಾತನಾಡಿ ‘ಕನ್ನಡಕ್ಕೆ ಮತ್ತಷ್ಟು ಜ್ಞಾನಪೀಠಗಳು ಲಭಿಸಬೇಕಿತ್ತು. ಪರಿಷತ್ತಿನ ಶತಮಾನೋತ್ಸವ ಭವನ ನಿರ್ಮಾಣ  ಮತ್ತು ಆಚರಣೆಗೆ ಸರ್ಕಾರ ಮತ್ತು ಬಿಬಿಎಂಪಿ ವತಿಯಿಂದ ಹಣ­ಕಾಸನ್ನು ಒದಗಿಸಲಾಗುವುದು’ ಎಂದರು.

ಕಸಾಪ ಸದಸ್ಯರಾದ ಸಿ.ಕೆ.­ರಾಮೇಗೌಡ ಮತ್ತು ಎಚ್.ಬಿ.ಎಲ್.­ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.