ADVERTISEMENT

ಸಿಇಟಿ: ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ಕೋರ್ಸ್‌ಗಳ ಪ್ರವೇಶಕ್ಕೆ ಸೋಮವಾರ ಆರಂಭವಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸುಗಮವಾಗಿ ನಡೆಯಿತು. ಗಣಿತ ಮತ್ತು ಜೀವ ವಿಜ್ಞಾನ ವಿಷಯದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಜೀವ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಆದರೆ ಗಣಿತ ವಿಷಯದ ಪ್ರಶ್ನೆಪತ್ರಿಕೆ ತುಸು ಕಷ್ಟ ಇತ್ತು ಎಂದು ನಗರದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ಜೀವ ವಿಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ದೀರ್ಘ ಉತ್ತರವನ್ನು ಬಯಸುವ ಹೆಚ್ಚಿನ ಪ್ರಶ್ನೆಗಳಿರಲಿಲ್ಲ. ಆದರೆ, ಗಣಿತ ಪ್ರಶ್ನೆಪತ್ರಿಕೆ ಇದಕ್ಕೆ ಹೊರತಾಗಿತ್ತು. ತುಸು ಕಠಿಣ ಎನಿಸಿತು. ಪರೀಕ್ಷಾ ಕೇಂದ್ರದಲ್ಲಿನ ವ್ಯವಸ್ಥೆ ಚೆನ್ನಾಗಿತ್ತು ಎಂದು ಪುಣೆ ಮೂಲದ ವಿದ್ಯಾರ್ಥಿನಿ ನಿಧಿ ಶೆಟ್ಟಿ ಹೇಳಿದರು. ಮತ್ತೊಬ್ಬ ವಿದ್ಯಾರ್ಥಿ ಎಸ್. ಬಿ.ಸಿದ್ಧಾರ್ಥ ಅವರೂ ಇದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದರು.

`ಪೂರ್ವತಯಾರಿ ಚೆನ್ನಾಗಿದ್ದ ಕಾರಣ ಜೀವವಿಜ್ಞಾನ ಸುಲಭ ಎನಿಸಿತು~ ಎಂದು ಚೆನ್ನೈನಿಂದ ಬಂದಿದ್ದ ಶ್ರೇಯಾ ಸುರೇಶ್ ಅಭಿಪ್ರಾಯಪಟ್ಟರು. `ಪರೀಕ್ಷೆಗೆ ಚೆನ್ನಾಗಿ ಓದಿದ್ದೆ. ಚೆನ್ನಾಗಿಯೇ ಬರೆದಿದ್ದೇನೆ. ಒಳ್ಳೆಯ ಅಂಕಗಳನ್ನು ಗಳಿಸುವ ವಿಶ್ವಾಸವಿದೆ~ ಎಂದು ವಿವೇಕ್ ತಿಳಿಸಿದರು.

ತಜ್ಞರ ವಿಶ್ಲೇಷಣೆ: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಗಣಿತ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಎಲ್ಲ ಅಧ್ಯಾಯಗಳಿಂದಲೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಥಮ ಪಿಯುಸಿ ಪಠ್ಯಕ್ಕೆ ಸಂಬಂಧಿಸಿದ 15 ಪ್ರಶ್ನೆಗಳನ್ನು ನೀಡಲಾಗಿತ್ತು ಎಂದು `ಬೇಸ್~ನ ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್. ಹನುಮಂತರಾಯ ವಿಶ್ಲೇಷಿಸಿದರು.

ಜೀವ ವಿಜ್ಞಾನದಲ್ಲಿ 50ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಿತ್ತು. ಪ್ರಥಮ ಪಿಯುಸಿ ಪಠ್ಯಕ್ರಮಕ್ಕೆ ಸಂಬಂಧಿಸಿದ 19 ಪ್ರಶ್ನೆಗಳನ್ನು ನೀಡಲಾಗಿತ್ತು. ದ್ವಿತೀಯ ಪಿಯುಸಿಯ ಎಲ್ಲ ಅಧ್ಯಾಯಗಳಿಂದಲೂ ಪ್ರಶ್ನೆಗಳನ್ನು ನೀಡಲಾಗಿತ್ತು ಎಂದು ಬೇಸ್‌ನ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಎಲ್.ಸೀತಾರಾಂ ತಿಳಿಸಿದರು.

ಹಾಜರಾತಿ
ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದ 1,20,945 ಅಭ್ಯರ್ಥಿಗಳ ಪೈಕಿ 90,169 (ಶೇ 74.15ರಷ್ಟು) ವಿದ್ಯಾರ್ಥಿಗಳು ಜೀವವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರು. 1,16,324 (ಶೇ 96.18ರಷ್ಟು) ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದರು. ಮಂಗಳವಾರ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ  ಪರೀಕ್ಷೆ ನಡೆಯಲಿದೆ.

ನಕಲಿ ಅಭ್ಯರ್ಥಿ ಪತ್ತೆ: ಉಡುಪಿ ಪರೀಕ್ಷಾ ಕೇಂದ್ರವೊಂದರಲ್ಲಿ ಬೇರೊಬ್ಬರ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬನನ್ನು ಪರೀಕ್ಷೆ ಆರಂಭಕ್ಕೂ ಮೊದಲೇ ಪತ್ತೆಹಚ್ಚಿ ಪರೀಕ್ಷಾ ಕೇಂದ್ರದಿಂದ ಹೊರಗೆ ಕಳುಹಿಸಲಾಗಿದೆ. ಬದಲಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.