ADVERTISEMENT

ಸಿಗ್ನಲ್ ಮುಕ್ತ ಕಾರಿಡಾರ್- ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಬೆಂಗಳೂರು: ಮೈಸೂರು ರಸ್ತೆಯ ಸಿರಸಿ ವೃತ್ತದಿಂದ ಅಗರ ಕೆರೆವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಯೋಜನೆಯಲ್ಲದೆ, ಪರ‌್ಯಾಯ ಮಾರ್ಗಗಳ ಬಗ್ಗೆಯೂ ಸಲಹೆ ನೀಡಲು ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಯನ್ನು ಸರ್ಕಾರ ರಚಿಸಿದೆ.

ಕೋರಮಂಗಲ ಮಾರ್ಗವಾಗಿ 12.16 ಕಿ.ಮೀ. ಉದ್ದದ ಸಿರಸಿ-ಅಗರ ಕಾರಿಡಾರ್ ನಿರ್ಮಾಣಕ್ಕೆ ಆ ಭಾಗದ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಕುರಿತು ಪುನರ್‌ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಕೋರಮಂಗಲ ಭಾಗದ ನಿವಾಸಿಗಳು, ಬಿಡಿಎ, ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಸೋಮವಾರ ವಿಕಾಸ ಸೌಧದಲ್ಲಿ ಕರೆದು ಚರ್ಚೆ ನಡೆಸಿದರು.

ಬಿಬಿಎಂಪಿ, ಬಿಡಿಎ, ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಲಭ್ಯ, ಸಾರಿಗೆ ಮತ್ತು ನಗರ ಯೋಜನಾ ಕೇಂದ್ರ (ಸಿಐಎಸ್‌ಟಿಯುಪಿ), ಬೆಂಗಳೂರು ಸಂಚಾರಿ ಪೊಲೀಸ್ ಸೇರಿದಂತೆ ಇತರ ಸಂಸ್ಥೆಗಳ ಪ್ರತಿನಿಧಿಗಳು ಉಪ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

`ಲಾಲ್‌ಬಾಗ್ ರಸ್ತೆಯ ಪ್ರೊ.ಎಂ.ಎಚ್.ಮರಿಗೌಡ ವೃತ್ತದಿಂದ ಅಗರ ಕೆರೆವರೆಗಿನ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣದ ಮಾರ್ಗ ವಿವಾದಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸುಗಮ ವಾಹನ ಸಂಚಾರಕ್ಕೆ ಪರ‌್ಯಾಯ ಮಾರ್ಗಗಳ ಬಗ್ಗೆ ಸಾರ್ವಜನಿಕರು ನಕ್ಷೆ ಸಮೇತ ವಿವರಿಸಬಹುದು. ಈ ಕುರಿತ ವರದಿಯನ್ನು ಆಗಸ್ಟ್ 25ರೊಳಗೆ ನೀಡಬೇಕು~ ಎಂದು ಅವರು ಸಮಿತಿಗೆ ಸೂಚಿಸಿದರು.

ಕೌಶಿಕ್ ಅಚ್ಚರಿ: ಸಿರಸಿ- ಅಗರ ರಸ್ತೆ ಕೋರಮಂಗಲ ಮೂಲಕ ಹಾದು ಹೋಗುವುದರ ಬದಲು, ಹೊಸೂರು ರಸ್ತೆಯಲ್ಲೇ ಹಾದು ಹೋದರೆ ಏನು ಸಮಸ್ಯೆ? ಹೊಸೂರು ರಸ್ತೆಯನ್ನೇ ಸ್ವಲ್ಪ ಅಗಲ ಮಾಡಿ ಅಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ಮಾಡುವುದರಿಂದ ಅನಗತ್ಯ ವೆಚ್ಚ ತಗ್ಗಿಸಬಹುದು. ಯೋಜನೆ ರೂಪಿಸುವಾಗ ಈ ಬಗ್ಗೆ ಏಕೆ ಚಿಂತನೆ ಮಾಡಿಲ್ಲ? ಇದೇನು ಗುತ್ತಿಗೆದಾರರಿಗೆ ಅನುಕೂಲವಾಗಲಿ ಎಂದು ರೂಪಿಸಿದ ಯೋಜನೆಯೇ ಎಂದು ಕೌಶಿಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.


ಅವರ ಈ ಮಾತು ಕೋರಮಂಗಲ ನಿವಾಸಿಗಳಲ್ಲಿ ಸಂತಸ ಹೆಚ್ಚಾಗಲು ಕಾರಣವಾಯಿತು. ಇದರಿಂದ ಪುಳಕಿತಗೊಂಡ ಅವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅವರ ಮಾತಿಗೆ ಪದೇ ಪದೇ ಚಪ್ಪಾಳೆ ತಟ್ಟಿದ್ದರಿಂದ ಸಿಟ್ಟಿಗೆದ್ದ ಕೌಶಿಕ್ ಅವರು `ಇದೇನು ನಾಟಕ ಅಲ್ಲ. ನೀವ್ಯಾಕೆ ಚಪ್ಪಾಳೆ ತಟ್ಟುತ್ತಿದ್ದೀರಿ. ನಾನು ನಿಮ್ಮನ್ನು ಮೆಚ್ಚಿಸಲು ಹೀಗೆ ಹೇಳುತ್ತಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.

ಸಿಐಎಸ್‌ಟಿಯುಪಿ ಅಧ್ಯಕ್ಷ ಟಿ.ಜಿ.ಸೀತಾರಾಮ್ ಮಾತನಾಡಿ, `ಉದ್ದೇಶಿತ ಯೋಜನೆ ಕಾರ್ಯಸಾಧುವಲ್ಲ. ಇದರ ಬದಲಿಗೆ, ಜಂಕ್ಷನ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸುವುದು ಒಳಿತು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT