ADVERTISEMENT

ಸಿಡಬ್ಲ್ಯೂಸಿ: ನಾಲ್ವರಿಗೆ ₹ 10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST

ಬೆಂಗಳೂರು: ಯುವತಿಯೊಬ್ಬಳನ್ನು ವಿನಾ ಕಾರಣ ಮೂರು ದಿನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಅಕ್ರಮ ಬಂಧನದಲ್ಲಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಅಧ್ಯಕ್ಷೆಯಾಗಿದ್ದ ಕೆ.ಅನಿತಾ ಶಿವಕುಮಾರ್ ಹಾಗೂ ಸದಸ್ಯರಾಗಿದ್ದ ಟಿ.ಎಸ್. ವಿಶಾಲಾಕ್ಷಿ, ವಿದ್ಯಾ ಐತಾಳ್ ಮತ್ತು ಶ್ರೀನಿವಾಸ್ ಅವರಿಗೆ ಹೈಕೋರ್ಟ್ ತಲಾ ₹ 10 ಸಾವಿರ ದಂಡ ವಿಧಿಸಿದೆ.

ಈ ಸಂಬಂಧ ಚಿಂತಾಮಣಿ ನಿವಾಸಿ ಶ್ರೀರಾಮ ರೆಡ್ಡಿ ಅವರು ‘ನನ್ನ ಮಗಳು ಸುಭಾಷಿಣಿಯನ್ನು ಸಿಡಬ್ಲ್ಯೂಸಿ ಅಕ್ರಮವಾಗಿ ಬಂಧನದಲ್ಲಿರಿಸಿದೆ’ ಎಂದು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಲೇವಾರಿ ಮಾಡಿತು.
ವಿಚಾರಣೆ ವೇಳೆ ಹಾಜರಿದ್ದ ಕೆ.ಅನಿತಾ ಶಿವಕುಮಾರ್ ಹಾಗೂ ಟಿ.ಎಸ್. ವಿಶಾಲಾಕ್ಷಿ, ವಿದ್ಯಾ ಐತಾಳ್ ಮತ್ತು ಶ್ರೀನಿವಾಸ್ ಅವರು ₹ 10 ಸಾವಿರ ದಂಡವನ್ನು ಕೋರ್ಟ್‌ಗೆ ಪಾವತಿಸಿದರು. ಈ ಮೊತ್ತವನ್ನು ಶ್ರೀರಾಮ ರೆಡ್ಡಿ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಪೀಠ ನಿರ್ದೇಶಿಸಿತು. ನಂತರ ಸುಭಾಷಿಣಿಯನ್ನು ತಂದೆಯ ವಶಕ್ಕೆ ನೀಡಲಾಯಿತು.

‘ಯುವತಿಯನ್ನು ಅಕ್ರಮ ಬಂಧನದಲ್ಲಿರಿಸಿದ್ದಕ್ಕೆ ಅನಿತಾ ಶಿವಕುಮಾರ್ ಹಾಗೂ ಸಿಡಬ್ಲ್ಯೂಸಿಯ ಮೂವರ ಸದಸ್ಯತ್ವವನ್ನು ಸರ್ಕಾರ ರದ್ದುಪಡಿಸಿದೆ. ಹೀಗಾಗಿ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯಪವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ADVERTISEMENT

ಪ್ರಕರಣವೇನು?:
ಸುಭಾಷಿಣಿ 10ನೇ ತರಗತಿಯಲ್ಲಿ ಮೂರು ಬಾರಿ ಅನುತ್ತೀರ್ಣಗೊಂಡಿದ್ದರು. ಇದರಿಂದ ತಂದೆ ಶ್ರೀರಾಮ ರೆಡ್ಡಿ, ಸುಭಾಷಿಣಿಯನ್ನು ನಗರದ ಯಲಹಂಕದಲ್ಲಿರುವ ತಮ್ಮ ಸಂಬಂಧಿಕರಾದ ಡಾ. ಅನಿತಾ ಮತ್ತು ಡಾ. ಅಶೋಕ್ ದಂಪತಿ ಮನೆಯಲ್ಲಿಟ್ಟಿದ್ದರು. ಬಿಡುವಿನ ವೇಳೆ ವೈದ್ಯ ದಂಪತಿ ಯುವತಿಗೆ ಪಾಠ ಹೇಳಿಕೊಡುತ್ತಿದ್ದರು.

‘ಸುಭಾಷಿಣಿ ಅಪ್ರಾಪ್ತೆ. ಆಕೆಯನ್ನು ವೈದ್ಯ ದಂಪತಿ ತಮ್ಮ ಮನೆಗೆಲಸಕ್ಕೆ ಇಟ್ಟುಕೊಂಡಿದ್ದಾರೆ’ ಎಂದು ಆಕೆಯನ್ನು ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿಡಲು ಸಿಡಬ್ಲ್ಯೂಸಿ ಅಧ್ಯಕ್ಷೆಯಾಗಿದ್ದ ಅನಿತಾ ಶಿವಕುಮಾರ್ ಆದೇಶಿಸಿದ್ದರು. ಇದರನ್ವಯ ಸುಭಾಷಿಣಿಯನ್ನು ಆ.29ರಿಂದ ಸೆಪ್ಟೆಂಬರ್ 1ರವರೆಗೆ ಬಾಲಮಂದಿರದಲ್ಲಿ ಇರಿಸಲಾಗಿತ್ತು. ವಿಚಾರಣೆ ವೇಳೆ ಸುಭಾಷಿಣಿ ಅಪ್ರಾಪ್ತೆ ಅಲ್ಲ ಎಂಬ ವಿಷಯ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.