ADVERTISEMENT

ಸಿನಿಮಾ ಪ್ರಶಸ್ತಿ ಪಟ್ಟಿಗೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 18:30 IST
Last Updated 10 ಜುಲೈ 2012, 18:30 IST

ಬೆಂಗಳೂರು: 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಗೆ ಹೈಕೋರ್ಟ್ ತಡೆ ನೀಡಿ ಮಂಗಳವಾರ ಆದೇಶಿಸಿದೆ.ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಉಪೇಂದ್ರ ಅಭಿನಯದ `ಸೂಪರ್~ ಚಿತ್ರವನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಈ ಆದೇಶ ಹೊರಡಿಸಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ `ಸೂಪರ್~ ಚಿತ್ರವನ್ನು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವುದು ಅವರ ಆರೋಪ.

ಅರ್ಜಿದಾರರ ದೂರೇನು?: ತಾವು ನಿರ್ದೇಶಿಸಿ, ನಟಿಸಿರುವ `ಬಿಂದಾಸ್ ಹುಡುಗಿ~ ಚಿತ್ರವನ್ನು ಆಯ್ಕೆ ಸಮಿತಿಯು ಕಡೆಗಣಿಸಿದೆ ಎನ್ನುವುದು ಪ್ರಿಯಾ ಅವರ ದೂರು. `ಸೂಪರ್~ ಚಿತ್ರದ ಛಾಯಾಗ್ರಾಹಕ ಅಶೋಕ ಕಶ್ಯಪ್ ಅವರು ಆಯ್ಕೆ ಸಮಿತಿಯಲ್ಲಿ ಇದ್ದರು. ಅದೇ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಇದು ಸ್ವಜನ ಪಕ್ಷಪಾತ ಎಂದು ಅವರು ಆರೋಪಿಸಿದ್ದಾರೆ.

ಬಿಂದಾಸ್ ಹುಡುಗಿ ಚಿತ್ರದ ಸಾಹಸ ದೃಶ್ಯಗಳಲ್ಲಿ `ಡ್ಯೂಪ್~ ನೆರವಿಲ್ಲದೆ ಚಿತ್ರದ ನಾಯಕ, ನಾಯಕಿಯರೇ ಪಾಲ್ಗೊಂಡಿದ್ದಾರೆ. `ನಾನೇ ಖುದ್ದಾಗಿ ಧ್ವನಿ ನೀಡಿದ್ದೇನೆ. ಸೂಪರ್‌ಗೆ ಹೋಲಿಸಿದರೆ ಎಲ್ಲ ದೃಷ್ಟಿಯಿಂದಲೂ ಒಳ್ಳೆಯ ಚಿತ್ರ. ಆದರೆ ಪ್ರಶಸ್ತಿಗೆ ಆಯ್ಕೆ ಆಗಿಲ್ಲ~ ಎಂದು ಅವರು ತಿಳಿಸಿದ್ದಾರೆ. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಕೋರ್ಟ್‌ನ ಮುಂದಿನ ಆದೇಶದವರೆಗೆ ಪಟ್ಟಿಗೆ ತಡೆ ನೀಡಿದರು. ವಿಚಾರಣೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.