ADVERTISEMENT

ಸಿಬಿಐ ತನಿಖೆಗೆ ಕೋರಿರುವ ಮಾಜಿ ಮೇಯರ್‌ಗಳು

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 20:10 IST
Last Updated 18 ಜುಲೈ 2012, 20:10 IST

ಬೆಂಗಳೂರು:  ಜಲಮಂಡಳಿ, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮ, ಬಿಬಿಎಂಪಿ ಹಾಗೂ ಬಿಡಿಎಗಳಲ್ಲಿ 2008-2011ರ ಅವಧಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಈ ಕುರಿತು  ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಮಾಜಿ ಮೇಯರ್‌ಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಪಿ.ಆರ್.ರಮೇಶ್, ಜೆ.ಹುಚ್ಚಪ್ಪ, ಎಂ. ರಾಮಚಂದ್ರಪ್ಪ ಅವರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹಾಗೂ ಇತರರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದೆ.

`ಪಾಲಿಕೆಯ ಗಾಂಧಿನಗರ, ಮಲ್ಲೇಶ್ವರ, ರಾಜರಾಜೇಶ್ವರಿನಗರ ವಿಭಾಗಗಳಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಸಲಾಗಿದೆ. ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯೂ ಸೇರಿದಂತೆ ಹಲವು ಹಂತಗಳಲ್ಲಿ ಅವ್ಯವಹಾರ ನಡೆದಿರುವುದು ಖಚಿತಗೊಂಡಿದೆ. ಆದರೆ, ತಪ್ಪಿತಸ್ಥರ ವಿರುದ್ಧ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವರದಿಯನ್ನು ಮುಚ್ಚಿಹಾಕಲಾಗಿದೆ.

`ಪಾಲಿಕೆಯ ಕೆಲವೇ ದಾಖಲೆಗಳನ್ನು ಪರಿಶೀಲಿಸಲಾಗಿದೆ. 1,507 ಕೋಟಿ ರೂಪಾಯಿ ಮೊತ್ತದ 9,956 ಕಾಮಗಾರಿಗಳ ದಾಖಲೆ ಪರಿಶೀಲಿಸಬೇಕಿದೆ. ಇದೇ ರೀತಿ ಮೇಲೆ ತಿಳಿಸಿರುವ ಎಲ್ಲ ಇಲಾಖೆಗಳಲ್ಲಿಯೂ ಭಾರಿ ಅವ್ಯವಹಾರ ನಡೆದಿದೆ. ಸಿಬಿಐ ತನಿಖೆಯಿಂದ ಮಾತ್ರ ಇವೆಲ್ಲ ಹೊರಕ್ಕೆ ಬರಲು ಸಾಧ್ಯ~ ಎನ್ನುವುದು ಅರ್ಜಿದಾರರ ಹೇಳಿಕೆ. ವಿಚಾರಣೆ ಮುಂದೂಡಲಾಗಿದೆ.

ಕೌನ್ಸೆಲಿಂಗ್: ಮನವಿಗೆ ಆದೇಶ
ಮೂಲ ಅಂಕಪಟ್ಟಿ ಸಿಗದ ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಿಇಟಿ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಲು ಆಗದ ಆಂಧ್ರ ಪ್ರದೇಶದ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಶಿಕ್ಷಣ ಇಲಾಖೆಯ ಮುಂದೆ ಮನವಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.

50ಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆ ಬರೆದಿದ್ದಾರೆ. ಸಿಇಟಿ ಪರೀಕ್ಷೆ ಕೂಡ ಬರೆದಿದ್ದಾರೆ. ಮೂಲ ಅಂಕಪಟ್ಟಿ ಅವರಿಗೆ ಇದುವರೆಗೆ ಸಿಕ್ಕಿಲ್ಲ. ಆದುದರಿಂದ ಕೌನ್ಸೆಲಿಂಗ್‌ಗೆ ಅವರಿಗೆ ಅನುಮತಿ ನೀಡುತ್ತಿಲ್ಲ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅರ್ಜಿ ಇತ್ಯರ್ಥಗೊಳಿಸಿದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ, ಶಿಕ್ಷಣ ಇಲಾಖೆಯ ಮೊರೆ ಹೋಗುವಂತೆ ತಿಳಿಸಿದರು.

ರೈಲ್ವೆ ಇಲಾಖೆ ವಿರುದ್ಧ ಅರ್ಜಿ
ದೊಡ್ಡಬಳ್ಳಾಪುರದ ರೈಲು ನಿಲ್ದಾಣದಲ್ಲಿ ಸಿಮೆಂಟ್ ತುಂಬುವ ಮತ್ತು ಇಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಅದನ್ನು ನಿಲ್ಲಿಸಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೆ ಆದೇಶಿಸಿದೆ.

ನಿಲ್ದಾಣ ಜನನಿಬಿಡ ಪ್ರದೇಶದಲ್ಲಿ ಇದೆ. ಸಿಮೆಂಟ್ ತುಂಬುವ, ಇಳಿಸುವ ಕಾರ್ಯದಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದಾಗಿ ವಿವಿಧ ರೋಗಗಳಿಗೆ ಸ್ಥಳೀಯರು ಗುರಿಯಾಗುತ್ತಿದ್ದಾರೆ ಎನ್ನುವುದು ಜಿ.ವೆಂಕಟೇಶ್ ಹಾಗೂ ಇತರರ ದೂರು. ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.

ವಕೀಲರ ಸಂಘದ ಮನವಿ
ನ್ಯಾಯಾಂಗದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಹೈಕೋರ್ಟ್ ವಿಚಕ್ಷಣ ದಳವನ್ನು ಬಲಪಡಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ, ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿಕೊಂಡಿದೆ.

ಎಲ್ಲ ನ್ಯಾಯಾಲಯಗಳಿಗೆ ಮುಖ್ಯ ನ್ಯಾಯಮೂರ್ತಿಗಳು ಅನಿರೀಕ್ಷಿತ ಭೇಟಿ ನೀಡಿ ಅಲ್ಲಿಯ ಕಾರ್ಯಕಲಾಪವನ್ನು ವೀಕ್ಷಿಸಬೇಕು ಎಂದೂ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಜೊತೆ ಹಿರಿಯ ವಕೀಲರು ಹಾಗೂ ಸಂಘದ ಪದಾಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ಮನವಿಯನ್ನು ಸಲ್ಲಿಸಲಾಗಿದೆ.

`ವಕೀಲರಿಗೆ ಮೂಲ ಸೌಕರ್ಯ ಒದಗಿಸಬೇಕು, ಹೈಕೋರ್ಟ್‌ಗೆ ಇನ್ನಷ್ಟು ಭದ್ರತೆ ನೀಡಬೇಕು, ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಸೂಚಿಸಬೇಕು ಎಂಬಿತ್ಯಾದಿಯಾಗಿ ಮನವಿ ಮಾಡಿಕೊಳ್ಳಲಾಗಿದೆ~ ಎಂದು ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.