ADVERTISEMENT

ಸಿಬ್ಬಂದಿ ಕೈ ಸೇರದ ಬಹುಮಾನದ ಹಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಬೆಂಗಳೂರು: `ನನಗೆ ಬರುವ ಪಿಂಚಣಿ ಹಣ ತಿಂಗಳ ಔಷಧಿಗೆ ಸಾಕಾಗುವುದಿಲ್ಲ. ಸರ್ಕಾರ ನಮಗೆ ಮುಂಚೆ ಘೋಷಿಸಿದ್ದ ಪರಿಹಾರದ ಹಣ ನೀಡಿದರೆ ಮಾತ್ರ ಪರಿಸ್ಥಿತಿ ಉತ್ತಮವಾಗುತ್ತೆ. ಇಲ್ಲದಿದ್ದರೆ ಮೇಲೆ (ಸಾವು) ಹೋಗುವುದೊಂದೇ ಉಳಿದ ಮಾರ್ಗ~.

`ನನಗೆ ಒಂದು ಕಣ್ಣು ಕಾಣೋದಿಲ್ಲ. ನಮ್ಮೆಜಮಾನ್ರು ಎಸ್‌ಟಿಎಫ್‌ನಲ್ಲಿ ಕೆಲಸ ಮಾಡಿದ್ರು. ವೀರಪ್ಪನ್ ಹಿಡಿದಿದ್ದಕ್ಕೆ ಬಹುಮಾನ ಕೊಡ್ತೀನಿ ಅಂದ ಸರ್ಕಾರ, ಅವರು ತೀರಿ ಹೋದ ಮೇಲೂ ನೀಡಿಲ್ಲ. ಈ ಬಗ್ಗೆ ಕೇಳಲು ಹೋದ್ರೆ, `ಪರಿಹಾರ ಬೇಡಲು ಮನೆಗೆ ಬಂದಿದ್ದೀರಿ. ಅದಕ್ಕೆ ಕೊಡಲ್ಲ ಹೋಗ್ರಿ ಅಂತ ಪೊಲೀಸ್ ಸಾಹೇಬ್ರು ಹೆದರಿಸ್ತಾರೆ~

`ನಮ್ಮೆಜಮಾನ್ರು ಎಸ್‌ಟಿಎಫ್‌ನಲ್ಲಿ ದಫೇದಾರ್ ಆಗಿದ್ದೋರು. ವೀರಪ್ಪನ್ ಹಿಡಿಯೋಕೆ ನೇಮಕ ಮಾಡಿದ ತಂಡದಲ್ಲಿ 8 ವರ್ಷ ಇದ್ರು. ಕೊನೆ ಗಳಿಗೇಲಿ ಇರ್ಲಿಲ್ಲ ಅಂತ ಅವರಿಗೆ ಕೊಡಬೇಕಿದ್ದ ಹಣಾನ ಇನ್ನೂ ಕೊಟ್ಟಿಲ್ಲ...~
-ವೀರಪ್ಪನ್ ಸೆರೆಹಿಡಿಯಲು ರಾಜ್ಯ ಸರ್ಕಾರ ನೇಮಕ ಮಾಡಿದ್ದ ಎಸ್‌ಟಿಎಫ್‌ನಲ್ಲಿ ಅಡುಗೆಯವರಾಗಿದ್ದ ಕೆ.ವಿ.ಹಿರಣ್ಣಯ್ಯ, ಗಂಡನನ್ನು ಕಳೆದುಕೊಂಡು ಕಂಗಾಲಾಗಿರುವ ಮೈಸೂರು ಮೂಲದ ಇಂದ್ರಮ್ಮ ಮತ್ತು ಬಾವಮ್ಮ ಅವರು ಶುಕ್ರವಾರ ನಗರದಲ್ಲಿ ಮಾಧ್ಯಮದವರ ಮುಂದೆ ತಮ್ಮ ರೋದನ ತೋಡಿಕೊಂಡರು.

ವೀರಪ್ಪನ್‌ನ ಹತನಾದ ಬಳಿಕ ಸರ್ಕಾರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಬಹುಮಾನ, ನಿವೇಶನ, ಬಡ್ತಿ ಘೋಷಿಸಿತ್ತು. ಅದನ್ನು 754 ಸಿಬ್ಬಂದಿಗೂ ಹಂಚಿಕೆ ಮಾಡಿತು. ಆದರೆ ಇನ್ನುಳಿದ ಸುಮಾರು 500 ಸಿಬ್ಬಂದಿಗೆ ಮಾತ್ರ ಈ ಬಹುಮಾನವನ್ನು ನೀಡುತ್ತಿಲ್ಲ ಎಂಬುದು ಕೆಎಸ್‌ಆರ್‌ಪಿ ನಿವೃತ್ತ ಸಿಬ್ಬಂದಿ ಆರೋಪ.

ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್‌ಟಿಎಫ್ ಸಿಬ್ಬಂದಿಗೆ ಬಹುಮಾನ ಹಾಗೂ ನಿವೇಶನ ನೀಡುವುದಾಗಿ ಹೇಳಿದ್ದರು. ಇಲ್ಲಿ ಸೇವೆ ಸಲ್ಲಿಸಿದ ಅವಧಿಯನ್ನು ಆಧರಿಸಿ, ಅಂದರೆ ಒಂದು ವರ್ಷ ಸೇವೆ ಸಲ್ಲಿಸಿದವರಿಗೆ 1 ಲಕ್ಷ ನಗದು ಮತ್ತು ನಿವೇಶನ, ಎರಡು ವರ್ಷ ಸೇವೆ ಸಲ್ಲಿಸಿದವರಿಗೆ 2 ಲಕ್ಷ ಮತ್ತು ನಿವೇಶನ ಮೂರು ವರ್ಷಕ್ಕಿಂತ ಹೆಚ್ಚು ಅವಧಿಯವರೆಗೆ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗೆ ಮೂರು ಲಕ್ಷ ಬಹುಮಾನ ಮತ್ತು ನಿವೇಶನ ನೀಡಲು ಉದ್ದೇಶಿಸಿತ್ತು.

ವೀರಪ್ಪನ್ ಸೆರೆಯಾಗುವ ಸಂದರ್ಭದಲ್ಲಿದ್ದ ಸಿಬ್ಬಂದಿಗೆ ಮಾತ್ರ ಪರಿಹಾರ ನೀಡಲಾಯಿತು. ಅದಕ್ಕೂ ಮುನ್ನ ಕೆಲಸ ಮಾಡಿದ ಕೆಎಸ್‌ಆರ್‌ಪಿಗೆ ವಾಪಸು ಹೋದ ಹಾಗೂ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಏಕೆ ಪರಿಹಾರ ನೀಡಿಲ್ಲ ಎಂದು `ಕರ್ನಾಟಕ ರಾಜ್ಯ ಕಾಯ್ದಿಟ್ಟ ಪೊಲೀಸ್ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿ ಸಂಘ~ದ ಮುಖಂಡ ಎಸ್.ಎ.ಸೂಡಿ ಪ್ರಶ್ನಿಸಿದರು.

ಈ ಬಗ್ಗೆ ಕೋರ್ಟ್‌ನಲ್ಲಿ ಸಂಘದ ಪರ ವಹಿಸಿರುವ ವಕೀಲ ಬಿ.ಬಿ.ಗೌಡರ್ ಮಾತನಾಡಿ, ಶೀಘ್ರವೇ ಬಹುಮಾನದ ಹಣವನ್ನು ನೀಡಬೇಕು ಎಂದು ನಾಲ್ಕು ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ.

ಈ ಬಗ್ಗೆ ಪೊಲೀಸ್ ಇಲಾಖೆಗೆ ಕೇಳಿದರೆ ಮತ್ತೊಂದು ಇಲಾಖೆಯತ್ತ ಬೊಟ್ಟು ಮಾಡುತ್ತಾರೆಯೇ ಹೊರತು, ಸಮಸ್ಯೆ ಬಗೆಹರಿಸುವ ಯತ್ನವನ್ನು ಮಾಡುತ್ತಿಲ್ಲ ಎಂದು ತಿಳಿಸಿದರು.ನಿವೃತ್ತ ಪೊಲೀಸ್ ಸಿಬ್ಬಂದಿ ಬಿ.ಎಂ.ತಮ್ಮಯ್ಯ, ಎಸ್.ಬಿ.ಬಾಳೂರ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.