ADVERTISEMENT

ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:05 IST
Last Updated 6 ಅಕ್ಟೋಬರ್ 2012, 19:05 IST
ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ
ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ   

ಬೆಂಗಳೂರು: `ಕರ್ನಾಟಕ ಬಂದ್~ನ ಬಿಸಿ ನಗರದ ಬಹುತೇಕ ಆಸ್ಪತ್ರೆಗಳಿಗೂ ತಟ್ಟಿದ್ದು, ವೈದ್ಯರು, ಸಿಬ್ಬಂದಿಯ ಕೊರತೆಯಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು.

ಸದಾ ರೋಗಿಗಳಿಂದ ಗಿಜಿಗುಡುತ್ತಿದ್ದ ನಗರದ ಕೇಂದ್ರ ಭಾಗದಲ್ಲಿರುವ ವಿಕ್ಟೋರಿಯಾ, ವಾಣಿ ವಿಲಾಸ, ಸೇಂಟ್ ಜಾನ್ಸ್ ಆಸ್ಪತ್ರೆ ಹಾಗೂ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ,  ಜಯನಗರ ಸಾರ್ವಜನಿಕ ಆಸ್ಪತ್ರೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಬಂದ್‌ನ ಪರಿಣಾಮ ಎದುರಿಸಿದವು.

ವಿಕ್ಟೋರಿಯಾ ಆಸ್ಪತ್ರೆಯ ಸಾಮಾನ್ಯ ವಿಭಾಗ, ಹೊರರೋಗಿಗಳ ವಿಭಾಗಗಳಲ್ಲಿ ವೈದ್ಯರ ಗೈರು ಎದ್ದು ಕಂಡಿತು. ಹೊಸದಾಗಿ ನಿರ್ಮಾಣಗೊಂಡ ಹೊರರೋಗಿಗಳ ವಿಭಾಗದ ಕಟ್ಟಡವೂ ವೈದ್ಯ ಮತ್ತು ರೋಗಿಗಳಿಲ್ಲದೇ ಭಣಗುಡುತ್ತಿತ್ತು. ಮಾಹಿತಿ ನೀಡುವ ಸಹಾಯವಾಣಿ ಕೇಂದ್ರ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೇ ಇರುವುದರಿಂದ ರೋಗಿಗಳು ತ್ರಾಸಪಡುವಂತಾಯಿತು.

ಹಿರಿಯ ವೈದ್ಯರು, ಸಹಾಯಕ ವೈದ್ಯರ ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ವಾಣಿ ವಿಲಾಸ ಆಸ್ಪತ್ರೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ತಪಾಸಣೆ ನಡೆಸಲು ವೈದ್ಯರಿಲ್ಲದೇ ತಾಯಂದಿರು ಎಳೆ ಕಂದಮ್ಮಗಳನ್ನು ಎತ್ತಿಕೊಂಡು ದಾದಿಗಳ ಬಳಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ರೋಗಿಗಳೂ ವೈದ್ಯರ ಬರುವಿಕೆಗಾಗಿ ಕಾಯುತ್ತಿದ್ದರು. ಇನ್ನು, ನಗರದ ಬಹುತೇಕ ಔಷಧಿ ಅಂಗಡಿಗಳು ಮುಚ್ಚಲಾಗಿತ್ತು. ಕೆಲವು ಕಡೆ ಮಧಾಹ್ನದ ನಂತರ ಅಂಗಡಿಗಳನ್ನು ತೆರೆಯಲಾಯಿತು.

ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಪ್ರತಿದಿನ 800 ಮಂದಿ ರೋಗಿಗಳ ಹೆಸರು ನೋಂದಣಿ ಆಗುತ್ತಿತ್ತು. ಆದರೆ, ಬಂದ್ ಪ್ರಯುಕ್ತ  ನೋಂದಾಯಿತರ ಸಂಖ್ಯೆ 200ಕ್ಕೆ ಇಳಿದಿತ್ತು. ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾರಾಂತ್ಯ 800 ರೋಗಿಗಳು ಹೊರವಿಭಾಗಕ್ಕೆ ದಾಖಲಾಗುತ್ತಿದ್ದರು, ಆದರೆ ಬಂದ್‌ನಿಂದಾಗಿ 70 ಮಂದಿ ಮಾತ್ರ ದಾಖಲಾಗಿದ್ದಾರೆ. ಸೇಂಟ್ಸ್ ಜಾನ್ ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ ಕಂಡುಬಂತು. `ಬಂದ್~ನ ಬಗ್ಗೆ ಮೊದಲೇ ಮಾಹಿತಿ ಇರುವುದರಿಂದ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ~ ಎಂದು ಸೇಂಟ್ ಜಾನ್ಸ್ ಆಸ್ಪತ್ರೆಯ ಸಿಬ್ಬಂದಿ ರಾಜಣ್ಣ `ಪ್ರಜಾವಾಣಿ~ಗೆ ತಿಳಿಸಿದರು.

`ವೈದ್ಯರು ತಿಂಗಳ ತಪಾಸಣೆಗಾಗಿ ಇದೇ ದಿನವನ್ನು ನಿಗದಿ ಮಾಡಿದ್ದರಿಂದ ಆಟೊಗೆ ಹಣ ತೆತ್ತು ಬಂದಿದ್ದೇನೆ.  ವೈದ್ಯರು ಬರುತ್ತಾರೆ ಎಂದು ದಾದಿಯೊಬ್ಬರು ಹೇಳಿದ್ದಾರೆ. ಹಾಗಾಗಿ ಕಾಯುತ್ತಿದ್ದೇನೆ~ ಎಂದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಕುಳಿತಿದ್ದ ಗರ್ಭಿಣಿ ಫಾತಿಮಾ ಅಳಲು ತೋಡಿಕೊಂಡರು.

ವಿಕ್ಟೋರಿಯಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಕಾಂತರಾಜು, `ಬಂದ್ ಪರಿಣಾಮದಿಂದ ರೋಗಿಗಳ ಸಂಖ್ಯೆ ಶೇ10 ರಷ್ಟಿದೆ. ಮೊದಲೇ ಘೋಷಣೆಯಾಗಿದ್ದರಿಂದ ರೋಗಿಗಳು ಅಷ್ಟಾಗಿ ಬರಲಿಲ್ಲ. ಬಹುತೇಕ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ರೋಗಿಗಳಿಲ್ಲದೇ ಇರುವುದರಿಂದ ಕೆಲಸವಿಲ್ಲದೇ ಖಾಲಿ ಕೂತಿದ್ದರು~ ಎಂದು ತಿಳಿಸಿದರು.

`ಬಂದ್ ಇದ್ದರೂ ಶೇ 70 ರಷ್ಟು ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಂದಿನಂತೆ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಬಂದ್ ನಿಂದ ಯಾವುದೇ ತೊಂದರೆಯಾಗಿಲ್ಲ~ ಎಂದು ಸ್ಪಷ್ಟಪಡಿಸಿದರು.

 ಬಂದ್‌ನ ಪರಿಣಾಮ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇದ್ದುದ್ದರಿಂದ ವಾಹನ ದಟ್ಟಣೆಯಿಲ್ಲದೇ ಆಂಬುಲೆನ್ಸ್‌ಗಳು ಸರಾಗವಾಗಿ ಸಂಚರಿಸಿದವು. ವಾಹನ ಸಂಚಾರ ವಿರಳವಾಗಿದ್ದರಿಂದ ಆಂಬುಲೆನ್ಸ್‌ಗಳು ಹೆಚ್ಚಿನ ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಾಯಿತು. ಜಿಕೆವಿಕೆಯ ಸಿಬ್ಬಂದಿ ಶುಕ್ರವಾರ 947 ಪ್ರಕರಣಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದ್ದರೆ, ಶನಿವಾರ 1275 ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಿದ್ದು ಕೂಡ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT