ಬೆಂಗಳೂರು: ಡ್ರಾಪ್ ನೀಡುವ ನೆಪದಲ್ಲಿ ಪ್ರಯಾಣಿಕರನ್ನು ಕ್ಯಾಬ್‌ಗೆ ಹತ್ತಿಸಿಕೊಂಡು ಸುಲಿಗೆ ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ತಿಗಳರಪಾಳ್ಯದ ಪ್ರಸಾದ್ (24), ಶಶಿಧರ್ (23), ದೊಡ್ಡಬಿದರಕಲ್ಲು ನಿವಾಸಿ ನಾಗೇಶ್ (21), ಕುಂಬಳಗೋಡಿನ ಲೋಕೇಶ (23) ಹಾಗೂ ಸುಬ್ರಹ್ಮಣ್ಯನಗರದ ಹರೀಶ ಅಲಿಯಾಸ್ ಯೋಗೇಶ (26) ಬಂಧಿತರು. ಆರೋಪಿಗಳಿಂದ 83 ಗ್ರಾಂ ಚಿನ್ನಾಭರಣ, 12 ಮೊಬೈಲ್‌ಗಳು ಸೇರಿದಂತೆ ₨ 4.15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಾಗರಬಾವಿ ನಿವಾಸಿ ಧನರಾಜ್ ಎಂಬುವರು ಜ.23ರಂದು ಬೆಳಿಗ್ಗೆ ಗೊರಗುಂಟೆ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಆರೋಪಿಗಳ ತಂಡ, ಡ್ರಾಪ್ ನೀಡುವುದಾಗಿ ವಾಹನದಲ್ಲಿ ಹತ್ತಿಸಿಕೊಂಡರು. ನಂತರ ಮಾರ್ಗ ಬದಲಿಸಿದ ಅವರು, ಸುಂಕದಕಟ್ಟೆಯ ಪೈಪ್‌ಲೈನ್ ರಸ್ತೆಗೆ ಕರೆದೊಯ್ದು 2 ಚಿನ್ನದ ಉಂಗುರ ಹಾಗೂ ₨ 3,000 ನಗದು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಧನರಾಜ್ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಗಳ ಪತ್ತೆಗೆ ಇನ್‌ಸ್ಪೆಕ್ಟರ್ ಬಾಳೇಗೌಡ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರೆಲ್ಲ ಕ್ಯಾಬ್ ಚಾಲಕರಾಗಿದ್ದು, ವಿಲಾಸಿ ಜೀವನ ನಡೆಸುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದರು. ಎರಡು ತಿಂಗಳಿನಿಂದ ಕಾಮಾಕ್ಷಿಪಾಳ್ಯ ವರ್ತುಲ ರಸ್ತೆ, ತುಮಕೂರು ರಸ್ತೆ, ಹೆಬ್ಬಾಳ ವರ್ತುಲ ರಸ್ತೆಗಳಲ್ಲಿ ಡ್ರಾಪ್ ನೀಡುವುದಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸುಲಿಗೆ ಮಾಡುತ್ತಿದ್ದುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರರು ಠಾಣೆಗೆ ಬಂದು ತಮ್ಮ ವಸ್ತುಗಳನ್ನು ಕೊಂಡೊಯ್ಯುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.