ADVERTISEMENT

ಸೆಂಚುರಿ ಕ್ಲಬ್‌ ಖಾಸಗಿ ಸ್ವತ್ತಲ್ಲ

ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದ ಕರ್ನಾಟಕ ಮಾಹಿತಿ ಆಯೋಗ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:38 IST
Last Updated 16 ಮಾರ್ಚ್ 2018, 19:38 IST
ಸೆಂಚುರಿ ಕ್ಲಬ್‌
ಸೆಂಚುರಿ ಕ್ಲಬ್‌   

ಬೆಂಗಳೂರು: ಕಬ್ಬನ್‌ ಪಾರ್ಕ್‌ ಆವರಣದಲ್ಲಿರುವ ಸೆಂಚುರಿ ಕ್ಲಬ್‌ ‘ಸಾರ್ವಜನಿಕ ಪ್ರಾಧಿಕಾರ’ ಎಂದು ಕರ್ನಾಟಕ ಮಾಹಿತಿ ಆಯೋಗವು ಬುಧವಾರ ಘೋಷಿಸಿದೆ.

ಸೆಂಚುರಿ ಕ್ಲಬ್‌ ನಡೆಸಲು ಸರ್ಕಾರವು ನೀಡಿರುವ ಜಾಗಕ್ಕೆ ಯಾವುದೇ ರೀತಿಯ ಬಾಡಿಗೆಯನ್ನು ಪಾವತಿಸಿಲ್ಲ. ನಿವೇಶನವನ್ನು ಸರ್ಕಾರದ ವತಿಯಿಂದ ಪರೋಕ್ಷವಾಗಿ ಪಡೆದಿರುವುದರಿಂದ ಇದನ್ನು ಆರ್ಥಿಕ ಸಹಕಾರ ಎಂದು ತೀರ್ಮಾನಿಸಿರುವ ರಾಜ್ಯ ಮಾಹಿತಿ ಆಯುಕ್ತ ಎಲ್‌.ಕೃಷ್ಣಮೂರ್ತಿ ನೇತೃತ್ವದ ಪೀಠವು, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 2(ಎಚ್‌) ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಿದೆ.

ಈ ಘೋಷಣೆಯನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿ ಮೂರು ತಿಂಗಳೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ಆಯುಕ್ತ ಎಂ.ಕೆ.ಅಯ್ಯಪ್ಪ ಅವರಿಗೆ ಆದೇಶಿಸಿ ಪ್ರಕರಣವನ್ನು ವಿಲೇವಾರಿ ಮಾಡಿದೆ.

ADVERTISEMENT

‘ಮೈಸೂರು ಸರ್ಕಾರವು 1913ರಲ್ಲಿ ಕ್ಲಬ್‌ಗೆ 7 ಎಕರೆ 20 ಗುಂಟೆ ಭೂಮಿಯನ್ನು ಉಚಿತವಾಗಿ ನೀಡಿತ್ತು. ಆಗ ಇದನ್ನು ಕಾಸ್ಮೊಪಾಲಿಟನ್‌ ಕ್ಲಬ್‌ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಯಾವುದೇ ಬಾಡಿಗೆಯನ್ನು ನಿಗದಿ ಮಾಡಿರಲಿಲ್ಲ. ಕ್ಲಬ್‌ನ ದಾಖಲೆಗಳ ನಿರ್ವಹಣೆಯ ಮಾಹಿತಿ ಕೋರಿ 2012ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಸಲ್ಲಿಸಿದ್ದೆ. ಇದಕ್ಕೆ ಲಿಖಿತ ಉತ್ತರ ನೀಡಿದ್ದ ಕ್ಲಬ್‌, ಇದು ಸಾರ್ವಜನಿಕ ಪ್ರಾಧಿಕಾರವಲ್ಲ. ಖಾಸಗಿ ಸಂಸ್ಥೆ ಎಂದು ತಿಳಿಸಿತ್ತು. ಹೀಗಾಗಿ, ಕ್ಲಬ್‌ ಅನ್ನು ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸುವಂತೆ ಕೋರಿ ಮಾಹಿತಿ ಆಯೋಗಕ್ಕೆ 2013ರ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ’ ಎಂದು ವಕೀಲ ಎಸ್‌.ಉಮಾಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದಿಂದ ನೇರ ಅಥವಾ ಪರೋಕ್ಷವಾಗಿ ಪ್ರೋತ್ಸಾಹಧನ, ಭೂಮಿ ಪಡೆದರೆ ಅಂತಹ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರ ಎನಿಸಿಕೊಳ್ಳುತ್ತವೆ. ಅವು ಆರ್‌ಟಿಐ ಅಡಿ ಬರುತ್ತವೆ ಎಂದು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ವಿಚಾರಣೆ ವೇಳೆ ಉಲ್ಲೇಖಿಸಿದ್ದೆ. ಇದನ್ನು ಪರಿಗಣಿಸಿದ ಆಯೋಗವು, ಕ್ಲಬ್‌ನ ಮಾಲೀಕತ್ವ ಹಾಗೂ ಬಾಡಿಗೆ ಪಾವತಿಸುತ್ತಿರುವುದಕ್ಕೆ ದಾಖಲೆಗಳನ್ನು ಒದಗಿಸುವಂತೆ ಕ್ಲಬ್‌ನ ಆಡಳಿತ ಮಂಡಳಿಗೆ ಸೂಚಿಸಿತ್ತು. ಆದರೆ, ಸಮರ್ಪಕ ದಾಖಲೆಗಳನ್ನು ಒದಗಿಸಲು ಆಡಳಿತ ಮಂಡಳಿ ವಿಫಲವಾಗಿತ್ತು’ ಎಂದರು.
**
‘ದಾಖಲೆಗಳು ಸುಟ್ಟಿವೆ ಎಂದಿದ್ದರು’
‘ಸೆಂಚುರಿ ಕ್ಲಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಿಂದಾಗಿ ದಾಖಲೆಗಳು ಸುಟ್ಟಿವೆ ಎಂದು ಪದಾಧಿಕಾರಿಗಳು ವಾರ್ಷಿಕ ಸಭೆಯಲ್ಲಿ ಮಾತನಾಡಿದ್ದನ್ನು ಚಿತ್ರೀಕರಿಸಿಕೊಂಡಿದ್ದರು. ಅದನ್ನು ಸಲ್ಲಿಸಿದ್ದ ಅವರು, ಆಯೋಗದ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರು. ಆದರೆ, ಮೈಸೂರು ಸರ್ಕಾರವು ಕ್ಲಬ್‌ಗೆ ಭೂಮಿ ನೀಡಿರುವ ದಾಖಲೆ ಪತ್ರಗಳನ್ನು ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡಿದ್ದೆವು. ಅದನ್ನು ಆಯೋಗಕ್ಕೆ ಸಲ್ಲಿಸಿದೆವು’ ಎಂದು ಎಸ್‌.ಉಮಾಪತಿ ವಿವರಿಸಿದರು.
**
‘ಕ್ಲಬ್‌ನ ಸದಸ್ಯತ್ವ ₹25 ಲಕ್ಷ’
‘ಸೆಂಚುರಿ ಕ್ಲಬ್‌ನಲ್ಲಿ ಸದಸ್ಯತ್ವ ಪಡೆಯಬೇಕಾದರೆ ಸುಮಾರು ₹25 ಲಕ್ಷ ನೀಡಬೇಕು. ಜನಸಾಮಾನ್ಯರು ಸದಸ್ಯತ್ವ ಪಡೆಯಲು ಸಾಧ್ಯವಿರಲಿಲ್ಲ. ಶಾಸಕರು, ಐಎಎಸ್‌ ಅಧಿಕಾರಿಗಳು, ಉದ್ಯಮಿಗಳು ಹಾಗೂ ಅವರ ಮಕ್ಕಳು ಇಲ್ಲಿ ಸದಸ್ಯತ್ವ ಪಡೆದಿದ್ದಾರೆ. ಸದಸ್ಯತ್ವ ಹೊಂದಿಲ್ಲದವರಿಗೆ ಕ್ಲಬ್‌ನ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು’ ಎಂದು ಎಸ್‌.ಉಮಾಪತಿ ತಿಳಿಸಿದರು.
**
‘ಆದೇಶ ಪ್ರಶ್ನಿಸಿ ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ’
ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದ ರಾಜ್ಯ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಲು ಸೆಂಚುರಿ ಕ್ಲಬ್‌ ನಿರ್ಧರಿಸಿದೆ.

‘ಈ ಆದೇಶವನ್ನು ಗೌರವಿಸುತ್ತೇನೆ. ಆದರೆ, ಕ್ಲಬ್‌ನ ಜಾಗವು ಸರ್ಕಾರದಿಂದ ಉಚಿತವಾಗಿ ಪಡೆದದ್ದಲ್ಲ. ಸ್ವಂತ ಜಾಗ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ನಮ್ಮ ಬಳಿ ಇವೆ’ ಎಂದು ಕ್ಲಬ್‌ನ ಅಧ್ಯಕ್ಷ ಎಸ್.ಪಿ. ರಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.