ADVERTISEMENT

ಸೆಲ್ಫಿ ವಿಡಿಯೊ ಮಾಡಿಟ್ಟು ಕ್ಯಾಬ್ ಚಾಲಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 20:11 IST
Last Updated 6 ಡಿಸೆಂಬರ್ 2017, 20:11 IST
ಅನಿಲ್
ಅನಿಲ್   

ಬೆಂಗಳೂರು: ‘ಬ್ಯಾಂಕ್‌ನಿಂದ ಯಾರೂ ಸಾಲ ಪಡೆಯಬೇಡಿ. ಸಾಲದಿಂದಾಗಿಯೇ ನಾನು ಇಂದು ನೇಣು ಹಾಕಿಕೊಳ್ಳುತ್ತಿದ್ದೇನೆ’ ಎಂದು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಟ್ಟು ಓಲಾ ಕ್ಯಾಬ್ ಚಾಲಕ ಅನಿಲ್ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೈಯಪ್ಪನಹಳ್ಳಿ ಸಮೀಪದ ಬೆನ್ನಿಗಾನಹಳ್ಳಿ ನಿವಾಸಿಯಾದ ಅನಿಲ್, ಎರಡು ವರ್ಷಗಳ ಹಿಂದೆ ಸವಿತಾ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಹಂಸಿಣಿ ಎಂಬ ಹೆಣ್ಣು ಮಗುವಿದೆ. ಮಂಗಳವಾರ ರಾತ್ರಿ ಅನಿಲ್ ತಮ್ಮ ಕೋಣೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. 8.45ರ ಸುಮಾರಿಗೆ ತಂದೆ ರಾಜಣ್ಣ ಕೋಣೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅನಿಲ್ ಹೇಳಿರುವುದೇನು?: ‘ಹಾಯ್ ಫ್ರೆಂಡ್ಸ್. ನಾನು ಅನಿಲ್ ಮಾತಾಡ್ತಿದೀನಿ. ಮದ್ವೆ ಆಗೋಕೂ ಮುಂಚೆ ಎಲ್ರೂ ಯೋಚ್ನೆ ಮಾಡಿ. ಆ ಕಡೆ ಅಪ್ಪ–ಅಮ್ಮನನ್ನು ಬಿಡುವಂತಿಲ್ಲ. ಇನ್ನೊಂದು ಕಡೆ ಹೆಂಡತಿ–ಮಕ್ಕಳನ್ನು ಬಿಡುವಂತಿಲ್ಲ. ಈಗ ಸಾಲದ ಕಾರಣಕ್ಕೆ ನಾನು ಸಾಯ್ತಿದ್ದೀನಿ. ಬ್ಯಾಂಕ್‌ನವರು ಬಡ್ಡಿ ಬಡ್ಡಿ ಅಂತ ಸಾಯ್ತಾರೆ. ಇದು ಎಲ್ರಿಗೂ ಗೊತ್ತಾಗ್ಬೇಕು ಅಂತಾನೇ ಈ ನಿರ್ಧಾರ ತಗೊಂಡಿದೀನಿ. ದಯವಿಟ್ಟು ಯಾರೂ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕೋ
ಬೇಡಿ’ ಎಂದು ಅನಿಲ್ 1 ನಿಮಿಷ 19 ಸೆಕೆಂಡ್‌ನ ವಿಡಿಯೊ ರೆಕಾರ್ಡ್ ಮಾಡಿಟ್ಟಿದ್ದಾರೆ.

ADVERTISEMENT

59 ಸೆಕೆಂಡ್‌ಗಳ ಮತ್ತೊಂದು ವಿಡಿಯೊದಲ್ಲಿ, ‘ಮನೆ ಕಟ್ಟೋಕೆ ಸಾಲ ಕೇಳ್ಕೊಂಡು ಬ್ಯಾಂಕ್‌ನವರ ಹತ್ತಿರ ಹೋಗ್ಬೇಡಿ. ಕಂಡೋರ ದುಡ್ಡು ತಿನ್ನೋಕ್ ಅಂತಾನೇ ಅವ್ರು ಇರೋದು. ರಾಜಕಾರಣಿಗಳನ್ನು ಸಹ ನಂಬಬೇಡಿ’ ಎಂದು ಹೇಳಿರುವ ಅನಿಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಬೈದಿದ್ದಾರೆ.

ಗಲಾಟೆ ಮಾಡಿದ್ದರು: ‘ಪ್ರಜಾವಾಣಿ’ ಜತೆ ಮಾತನಾಡಿದ ಮೃತರ ತಂದೆ ರಾಜಣ್ಣ, ‘ಮನೆ ಕಟ್ಟುವ ಸಲುವಾಗಿ ಎಂಟು ವರ್ಷಗಳ ಹಿಂದೆ ಎಸ್‌ಬಿಐನ ನಾಗಾವರಪಾಳ್ಯ ಶಾಖೆಯಲ್ಲಿ ₹ 4 ಲಕ್ಷ ಸಾಲ ಪಡೆದಿದ್ದೆವು. ಆರಂಭದಲ್ಲಿ ಶೇ 8ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ ಬ್ಯಾಂಕ್‌ನವರು, ಕ್ರಮೇಣ ಅದನ್ನು
ಶೇ 12ಕ್ಕೆ ಏರಿಸಿದರು. ತಿಂಗಳಿಗೆ ₹ 6,800 ಕಟ್ಟಬೇಕಿತ್ತು’ ಎಂದು ಹೇಳಿದರು.

‘ಎರಡು ಕಂತುಗಳನ್ನು ಕಟ್ಟಲು ಆಗಿರಲಿಲ್ಲ. ಈ ಕಾರಣಕ್ಕೆ ಸೋಮವಾರ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದ ಬ್ಯಾಂಕ್ ಅಧಿಕಾರಿಗಳು, ‘ಮನೆಯನ್ನು ಹರಾಜು ಕೂಗುತ್ತೇವೆ’ ಎಂದು ಬೆದರಿಸಿ ಹೋಗಿದ್ದರು. ಅಲ್ಲದೆ, ನಿತ್ಯವೂ ಮಗನಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಎಂಟು ವರ್ಷಗಳಿಂದ ಸಾಲ–ಬಡ್ಡಿ ಕಟ್ಟುತ್ತ ಬಂದಿದ್ದರೂ, ‘ಇನ್ನೂ ₹ 4.70 ಲಕ್ಷ ಸಾಲ ಪಾವತಿಸುವುದು ಬಾಕಿ ಇದೆ’ ಎಂದಿದ್ದರು. ಇದೇ ಬೇಸರದಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪೊಲೀಸರು ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಬ್ಯಾಂಕ್‌ನವರ ಕಿರುಕುಳದ ಬಗ್ಗೆ ಮಗ ಮಂಗಳವಾರ ಸಂಜೆ ಸಹ ನನ್ನೊಂದಿಗೆ ಮಾತನಾಡಿದ್ದ. ಆಗ ನಾನು ಕೆಲಸದ ನಿಮಿತ್ತ ನಾಗಾವರಕ್ಕೆ ಹೋಗಿದ್ದೆ. ಯಾವುದನ್ನೂ ಮನಸ್ಸಿಗೆ ಹಚ್ಚಿ ಕೊಳ್ಳಬೇಡ. ದುಡಿದು ಸಾಲ ತೀರಿಸಿದರಾಯಿತು ಎಂದು ನಾನೂ ಸಮಾಧಾನ ಹೇಳಿದ್ದೆ. ರಾತ್ರಿ ಆತನನ್ನು ಮಾತನಾಡಿಸಲು ಕೋಣೆಗೆ ಹೋದಾಗ ನೇಣು ಹಾಕಿಕೊಂಡುಬಿಟ್ಟಿದ್ದ’ ಎಂದು ಹೇಳಿದರು.

‘ಗಲಾಟೆ ಮಾಡಿಲ್ಲ’

‘₹ 4 ಲಕ್ಷ ಸಾಲ ಪಡೆದಿದ್ದ ರಾಜಣ್ಣ, ಕಂತುಗಳನ್ನು ಸರಿಯಾಗಿ ಕಟ್ಟುತ್ತಿರಲಿಲ್ಲ. ಹೀಗಾಗಿ ಬಡ್ಡಿ ಜಾಸ್ತಿಯಾಗಿತ್ತು. ನಾವು ಅವರ ಮನೆ ಹತ್ತಿರ ಹೋಗಿ ಗಲಾಟೆ ಮಾಡಿಲ್ಲ. ಕಾನೂನಿನ ಪ್ರಕಾರವೇ ನೋಟಿಸ್ ಕಳುಹಿಸಿದ್ದೆವು.
ಅನಿಲ್ ಸಾವಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಶಾಖಾ ವ್ಯವಸ್ಥಾಪಕ ಸಂಜೀವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.