ADVERTISEMENT

ಸೆಸ್ ತೆರಿಗೆ ಇಳಿಸಲು ಸಾಧ್ಯವಿಲ್ಲ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ತೈಲ ಬೆಲೆ ಏರಿಕೆಯಿಂದ ನಾಗರಿಕರಿಗೆ ಅಧಿಕ ಹೊರೆಯಾಗಿದೆ. ರಾಜ್ಯ ಸರ್ಕಾರ ತೈಲದ ಮೇಲಿನ ಸೆಸ್ ತೆರಿಗೆಯನ್ನು ಇಳಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇಲ್ಲಿ ಒತ್ತಾಯಿಸಿದರು.

ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನವೀಕೃತ ಜಸ್ಮಾದೇವಿ ಭವನ ಕಲ್ಯಾಣ ಮಂಟಪವನ್ನುಉದ್ಘಾಟಿಸಿ ಅವರು ಮಾತನಾಡಿದರು.

 `ಕೇಂದ್ರ ಸರ್ಕಾರ ಎರಡು ತಿಂಗಳಲ್ಲಿ ನಾಲ್ಕು ಬಾರಿ ಬೆಲೆ ಏರಿಕೆ ಮಾಡಿದೆ. ಯುಪಿಎ ಅಂಗ ಪಕ್ಷಗಳು ಬೆಲೆ ಏರಿಕೆ ಇಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯ ಸರ್ಕಾರ ಕೂಡ ಈ ಕುರಿತು ಕ್ರಮ ಕೈಗೊಳ್ಳಲು ಚಿಂತಿಸಲಿದೆ~ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಸ್ಮಾದೇವಿ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಸಚಿವ ಆರ್.ಆಶೋಕ, `ಭೋವಿ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಬಳಿ ಇದೆ. ಈ ಕುರಿತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಆಶ್ವಾಸನೆ ನೀಡಿದರು.

`ಯಾವುದೇ ಸಮುದಾಯಗಳು ಸರ್ಕಾರ ನೀಡುವ ಅನುದಾನದ ಮೇಲೆ ಅವಲಂಬಿತವಾಗಬಾರದು. ಸರ್ಕಾರ ನೀಡುವ ಹಣ ತಾತ್ಕಾಲಿಕ ಪ್ರೋತ್ಸಾಹ ಮಾತ್ರ. ಸ್ವಯಂ ಶಕ್ತಿಯಿಂದ ಸಮಾಜದಲ್ಲಿ ಅಭಿವೃದ್ಧಿ ಹೊಂದಬೇಕು~ ಎಂದು ಸಲಹೆ ಮಾಡಿದರು.

`ಸಮುದಾಯಗಳು ಪ್ರಗತಿ ಹೊಂದಲು ಶಿಕ್ಷಣ ಅವಶ್ಯಕವಾಗಿದೆ. ಎಲ್ಲಾ ಜನರು ವಿದ್ಯಾವಂತರಾದರೆ ಸಮುದಾಯದ ಏಳಿಗೆಯಾಗುತ್ತದೆ. ಇಂತಹ ಸಮುದಾಯಗಳು ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಬೇಕು~ ಎಂದು ಕರೆ ನೀಡಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, `ಸರ್ಕಾರ ಭೋವಿ ಜನಾಂಗದ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಅಧಿಕಾರಿ ನೇಮಕ ಮಾಡಬೇಕು. ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ನಿಗಮ ಮಂಡಳಿಗೆ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು~ ಎಂದು ಮನವಿ ಮಾಡಿದರು.

ಕೆ.ಸಿ.ಜನರಲ್ ಆಸ್ಪತ್ರೆಯ ನಿವೃತ್ತ ಅಧೀಕ್ಷಕ ಡಾ.ಎಂ.ರಾಮಯ್ಯ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಎಚ್.ವೀರಪ್ಪ, ಮಾಜಿ ಶಾಸಕಿ ಶಕುಂತಲಾ ಚೌಗ್ಲೆ ಅವರಿಗೆ ಜಸ್ಮಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ರಘು, ಮಾಜಿ ಉಪಮೇಯರ್ ಎನ್.ದಯಾನಂದ್, ಬಿಬಿಎಂಪಿ ಸದಸ್ಯರಾದ ಎಂ.ಕೃಷ್ಣ, ಕೆ.ಚಂದ್ರಶೇಖರ್, ಜಸ್ಮಾ ದೇವಿ ಭವನದ ಶಿಲ್ಪಿ ಪ್ರಶಾಂತ್ ಜಿ.ಪೊಲ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.