ADVERTISEMENT

ಸೈನಿಕನ ಕೊಂದು ಶವ ಸುಟ್ಟ ಸಿಪಾಯಿಗಳು!

ಎಎಸ್‌ಸಿಯಲ್ಲಿ ನಡೆದಿದ್ದ ಹತ್ಯೆ ರಹಸ್ಯ ಬಯಲು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 6:38 IST
Last Updated 31 ಮಾರ್ಚ್ 2018, 6:38 IST
ಪಂಕಜ್ ಕುಮಾರ್
ಪಂಕಜ್ ಕುಮಾರ್   

ಬೆಂಗಳೂರು: ತಮ್ಮ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಕ್ಕೆ ಸೇನೆಯ ಪೋಸ್ಟ್‌ಮನ್‌ ಪಂಕಜ್ ಕುಮಾರ್ (35) ಅವರನ್ನು ಕೊಲೆ ಮಾಡಿ, ಸೇನಾ ತರಬೇತಿ ಕೇಂದ್ರದ (ಎಎಸ್‌ಸಿ) ಆವರಣದಲ್ಲೇ ಶವ ಸುಟ್ಟು ಹಾಕಿದ್ದ ಇಬ್ಬರು ಸಿಪಾಯಿಗಳನ್ನು (ಜವಾನರು) ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಮುರಳಿಕೃಷ್ಣ ಹಾಗೂ ಧನರಾಜ್ ಬಂಧಿತರು. ಬಿಹಾರದ ಪಂಕಜ್‌, ಆರು ತಿಂಗಳಿನಿಂದ ವಿವೇಕನಗರದ ಎಎಸ್‌ಸಿಯಲ್ಲಿ (ದಕ್ಷಿಣ ವಿಭಾಗ) ಕೆಲಸ ಮಾಡುತ್ತಿದ್ದರು. ಅಲ್ಲೇ ತರಬೇತಿ ಪಡೆಯುತ್ತಿದ್ದ ಅರೋಪಿಗಳು, ಮಾರ್ಚ್ 23ರ ರಾತ್ರಿ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. ನಂತರ ಶವವನ್ನು ಅರೆಬರೆ ಸುಟ್ಟು, ಕಸದ ರಾಶಿಯಲ್ಲಿ ಹೂತು ಹಾಕಿದ್ದರು.

ಐಡಿ ಕಾರ್ಡ್‌ ಗಲಾಟೆ: ಮುರಳಿಕೃಷ್ಣ ತಿಂಗಳ ಹಿಂದೆ ಪಂಕಜ್ ಅವರ ಗುರುತಿನ ಚೀಟಿ ಹಾಗೂ ಮೊಬೈಲ್ ಕಳವು ಮಾಡಿದ್ದ. ತಮ್ಮ ಐಡಿ ಕಾರ್ಡ್ ಕಳವಾಗಿರುವ ಸಂಬಂಧ ಅವರು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಆಂತರಿಕ ತನಿಖೆಗೆ ಆದೇಶಿಸಿದ್ದ ಅಧಿಕಾರಿಗಳು, ಮುರಳಿ
ಕೃಷ್ಣ ಹಾಗೂ ಧನರಾಜ್ ಸೇರಿದಂತೆ ಅನುಮಾನದ ಮೇಲೆ 20ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.

ADVERTISEMENT

ತನಿಖೆಗೆ ಚುರುಕುಗೊಳ್ಳುತ್ತಿದ್ದಂತೆಯೇಯಾರದ್ದೋ ಹೆಸರಿನಿಂದ ಪಂಕಜ್‌ಗೆ ಕರೆ ಮಾಡಿದ್ದ ಆರೋಪಿಗಳು, ‘ನಿಮ್ಮ ಐಡಿ ಕಾರ್ಡ್‌ ನಮಗೆ ಸಿಕ್ಕಿದೆ. ಅದರ ಮಹತ್ವ ಏನು ಎಂಬುದು ನಮಗೆ ಗೊತ್ತು. ₹60 ಸಾವಿರ ಕೊಟ್ಟರೆ ಅದನ್ನು ತಲುಪಿಸುತ್ತೇವೆ’ ಎಂದಿದ್ದರು. ಆ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಪಂಕಜ್ ತಂದಿದ್ದರು.

ಕರೆ ಬಂದಿದ್ದ ಸಂಖ್ಯೆಗೆ ವಾಪಸ್ ಕರೆ ಮಾಡಿದ್ದ ಅಧಿಕಾರಿಗಳು, ‘ಐಡಿ ಕಾರ್ಡನ್ನು ಎಎಸ್‌ಸಿಗೆ ತಂದು ಕೊಡಿ. ನೀವು ಕೇಳಿದಷ್ಟು ಹಣ ಕೊಡುತ್ತೇವೆ’ ಎಂದಿದ್ದರು. ಹೀಗೆ, ನಾಲ್ಕೈದು ಬಾರಿ ಮನವಿ ಮಾಡಿದರೂ ಅದನ್ನು ಮರಳಿಸದ ಆರೋಪಿಗಳು, ನಂತರ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡಿದ್ದರು. ಕೊನೆಗೆ ಅಧಿಕಾರಿಗಳು ಪೊಲೀಸರಿಗೆ ದೂರು ಕೊಡುವ ನಿರ್ಧಾರಕ್ಕೆ ಬಂದಿದ್ದರು. ಇದರಿಂದ ಭೀತಿಗೆ ಒಳಗಾದ ಮುರಳಿಕೃಷ್ಣ, ಪಂಕಜ್ ಅವರನ್ನು ಕೊಲೆಗೈದರೆ ಕಳ್ಳತನ ಪ್ರಕರಣದ ತನಿಖೆ ಸ್ಥಗಿತಗೊಳ್ಳಬಹುದು ಎಂದು ಯೋಚಿಸಿದ್ದ. ಈ ವಿಚಾರವಾಗಿ ಗೆಳೆಯ ಧನರಾಜ್ ಜತೆ ಚರ್ಚೆ ನಡೆಸಿದಾಗ, ಕೃತ್ಯಕ್ಕೆ ತಾನೂ ಕೈಜೋಡಿಸುವುದಾಗಿ ಆತ ಭರವಸೆ ಕೊಟ್ಟಿದ್ದ.

ಮಾರ್ಚ್ 23ರ ರಾತ್ರಿ ಎಎಸ್‌ಸಿ ಆವರಣದ ಪಹರೆ ಕೆಲಸಕ್ಕೆ ನಿಯೋಜಿತರಾಗಿದ್ದ ಆರೋಪಿಗಳು, ಟವೆಲ್ ಹಾಗೂ ಚಾಕು ತೆಗೆದುಕೊಂಡು 12 ಗಂಟೆ ಸುಮಾರಿಗೆ ಪಂಕಜ್ ಕೊಠಡಿಗೆ ನುಗ್ಗಿದ್ದರು. ಟವೆಲ್‌ನಿಂದ ಕುತ್ತಿಗೆ ಬಿಗಿಯುತ್ತಿದ್ದಂತೆಯೇ ಎಚ್ಚರಗೊಂಡ ಪಂಕಜ್, ಚಾಕು ಕಿತ್ತುಕೊಂಡು ಧನರಾಜ್‌ನ ಕೈಗೆ ಹಲ್ಲೆ ನಡೆಸಿದ್ದರು. ಕೊನೆಗೆ ಇಬ್ಬರೂ ಸೇರಿ ಚಾಕು ಕಸಿದುಕೊಂಡು ಹೊಟ್ಟೆ, ತೊಡೆಗೆ ಇರಿದು ಅವರನ್ನು ಸಾಯಿಸಿದ್ದರು.

ನಂತರ ಶವವನ್ನು ಟ್ರಕ್‌ನಲ್ಲಿ ಹಾಕಿಕೊಂಡು ಹೊರಟ ಆರೋಪಿಗಳು, ಆವರಣದಲ್ಲೇ ಇರುವ ಕುದುರೆ ಯಾರ್ಡ್‌ ಬಳಿ ‌ಸುಟ್ಟು ಹಾಕಿದ್ದರು. ಬಳಿಕ ಕೊಠಡಿಗೆ ವಾಪಸಾಗಿ, ರಕ್ತದ ಕಲೆಗಳನ್ನೆಲ್ಲ ಒರೆಸಿ ಸ್ವಚ್ಛಗೊಳಿಸಿದ್ದರು. 3 ಗಂಟೆ ಸುಮಾರಿಗೆ ಪುನಃ ಆ ಸ್ಥಳಕ್ಕೆ ಹೋಗಿ, ಅರೆ ಬೆಂದಿದ್ದ ದೇಹವನ್ನು ಮತ್ತೆ ಟ್ರಕ್‌ನಲ್ಲಿ ಹಾಕಿಕೊಂಡು ಕಸದ ರಾಶಿ ಕಡೆಗೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಹೊರಬಂದಿದ್ದ ಅಧಿಕಾರಿಯೊಬ್ಬರು (ಡ್ಯೂಟಿ ಆಫಿಸರ್), ನಸುಕಿನ ವೇಳೆ ಟ್ರಕ್ ಬಳಸುತ್ತಿರುವುದನ್ನು ಪ್ರಶ್ನೆ ಮಾಡಿದ್ದರು. ಅದಕ್ಕೆ ಆರೋಪಿಗಳು, ‘ಸ್ವಲ್ಪ ಕಸ ಇತ್ತು. ಎಸೆಯಲು ಹೋಗುತ್ತಿದ್ದೇವೆ’ ಎಂದಿದ್ದರು. ಅವರ ಮಾತನ್ನು ನಂಬಿ ಅಧಿಕಾರಿ ಸುಮ್ಮನೆ ಹೋಗಿದ್ದರು. ನಂತರ ಆರೋಪಿಗಳು ಶವವನ್ನು ಕಸದ ರಾಶಿಯಲ್ಲಿ ಎಸೆದು ಮಣ್ಣು ಮುಚ್ಚಿ ಬಂದಿದ್ದರು.

ಸಂದೇಶ ರವಾನೆ: ಬೆಳಿಗ್ಗೆ 4.30ರ ಸುಮಾರಿಗೆ ಆರೋಪಿಗಳು ಪಂಕಜ್ ಮೊಬೈಲ್‌ನಿಂದ, ‘ನಾನು ಎಎಸ್‌ಸಿ ಉತ್ತರ ವಿಭಾಗಕ್ಕೆ ಪರೇಡ್‌ಗೆ ಹೋಗುತ್ತಿದ್ದೇನೆ. ಬರುವುದು ಸ್ವಲ್ಪ ತಡವಾಗುತ್ತದೆ’ ಎಂದು ಅಧಿಕಾರಿಗಳಿಗೆ ಸಂದೇಶ ಕಳುಹಿಸಿದ್ದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಸುಬೇದಾರ್ ಸುರೇನ್ ಪವೇ ಅವರು ಕಸದ ರಾಶಿ ಬಳಿ ಹೋದಾಗ ವ್ಯಕ್ತಿಯೊಬ್ಬರ ಕೈ ಕಾಣಿಸುತ್ತಿತ್ತು. ಕೂಡಲೇ ಅವರು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ಹೊರತೆಗೆದಿದ್ದರು. ಮುಖ ಪೂರ್ತಿ ಸುಟ್ಟಿದ್ದರಿಂದ ಆರಂಭದಲ್ಲಿ ಗುರುತು ಪತ್ತೆಯಾಗಿರಲಿಲ್ಲ. ಪರೇಡ್‌ಗೆ ತೆರಳುತ್ತಿರುವುದಾಗಿ ಹೇಳಿದ್ದ ಪಂಕಜ್, ಸಂಜೆಯಾದರೂ ವಾಪಸ್ ಬಾರದೆ ಇದ್ದಾಗ ಅಧಿಕಾರಿಗಳು ಅವರಿಗೆ ಕರೆ ಮಾಡಿದ್ದರು.

ಮೊಬೈಲ್ ಸ್ವಿಚ್ಡ್‌ಆಫ್ ಆಗಿದ್ದರಿಂದ ಮೃತವ್ಯಕ್ತಿ ಅವರೇ ಇರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಕೊನೆಗೆ ಅಂಗಾಲಿನಲ್ಲಿದ್ದ ಮಚ್ಚೆಯ ಗುರುತಿನಿಂದ ಮೃತರ ಗುರುತನ್ನು ಪತ್ತೆ ಮಾಡಲಾಗಿತ್ತು.

ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯ ನಾಶ (201) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರಿಗೆ, ಧನರಾಜ್ ಹಾಗೂ ಮುರಳಿಕೃಷ್ಣ ರಾತ್ರಿ ವೇಳೆ ಟ್ರಕ್‌ನಲ್ಲಿ ಸಂಚಾರ ನಡೆಸಿರುವ ವಿಚಾರ ಗೊತ್ತಾಯಿತು. ಅವರ ನಸುಕಿನ ವೇಳೆ ಕಸದ ರಾಶಿ ಕಡೆಯಿಂದ ಬರುತ್ತಿರುವ ದೃಶ್ಯ ಸಹ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

‘ಪಂಕಜ್ ಚಾಕುವಿನಿಂದ ಇರಿದಿದ್ದರಿಂದ ಧನರಾಜ್ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿಗೆ ತೆರಳಿ ಗಾಯದ ಬಗ್ಗೆ ವಿಚಾರಿಸಿದಾಗ, ‘ಟ್ರಿನಿಟಿ ವೃತ್ತದಲ್ಲಿ ರಾತ್ರಿ ಬೈಕ್ ಅಪಘಾತ ಸಂಭವಿಸಿ ಗಾಯವಾಯಿತು’ ಎಂದು ಹೇಳಿದ್ದ. ನಂತರ ಆ ವೃತ್ತದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಅಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ ಎಂಬುದು ಖಚಿತವಾಯಿತು. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡ. ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದ ಮುರಳಿಕೃಷ್ಣನನ್ನೂ ಬಂಧಿಸಿದೆವು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಂಕಜ್ ಅವರು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ಅವರಿಗೆ ಎರಡು ತಿಂಗಳ ಹೆಣ್ಣು ಮಗು ಇದೆ. ವಾರದ ಹಿಂದಷ್ಟೇ ಬಿಹಾರಕ್ಕೆ ಹೋಗಿ ಪತ್ನಿ–ಮಗುವನ್ನು ನೋಡಿಕೊಂಡು ಬಂದಿದ್ದರು.

ವರ್ಗಾವಣೆಯ ಶಿಕ್ಷೆಯಾಗಿತ್ತು
ಆರೋಪಿಗಳಿಬ್ಬರು ಮೊದಲು ಆಂಧ್ರದ ಸೇನಾ ತರಬೇತಿ ಕೇಂದ್ರದಲ್ಲಿದ್ದರು. ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದರು ಎಂಬ ಕಾರಣಕ್ಕೆ ವರ್ಗಾವಣೆಯ ಶಿಕ್ಷೆ ವಿಧಿಸಲಾಗಿತ್ತು. ಹೀಗೆ, ಬೆಂಗಳೂರು ಎಎಸ್‌ಸಿಗೆ ಬಂದು, ಇಲ್ಲೂ ಅದೇ ಪ್ರವೃತ್ತಿ ಮುಂದುವರಿಸಿದ್ದರು. ಇವರ ವಿರುದ್ಧ ಈಗಾಗಲೇ ಸೇನಾ ಅಕಾಡೆಮಿಯಲ್ಲಿ ನಾಲ್ಕು ದೂರುಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಅಮಾನತಿನ ಭಯ
‘ನಾನೇ ಐಡಿ ಕಾರ್ಡ್ ಕದ್ದಿದ್ದು ಎಂಬ ಸಂಗತಿ ಎಲ್ಲರಿಗೂ ಗೊತ್ತಾಗಿ ಹೋಗಿತ್ತು. ಅಧಿಕಾರಿಗಳು ನನಗೆ 90 ರಿಂದ 120 ದಿನ ಅಮಾನತು ಶಿಕ್ಷೆ ನೀಡುತ್ತಾರೆ ಅಥವಾ ಆರ್ಡರ್ಲಿ ಚಾಕರಿಯ ಶಿಕ್ಷೆ ವಿಧಿಸುತ್ತಾರೆ ಎಂಬ ಭಯ ಕಾಡುತ್ತಿತ್ತು. ಪಂಕಜ್ ಇಲ್ಲವಾದರೆ, ಆ ಪ್ರಕರಣದ ತನಿಖೆಯೂ ನಿಲ್ಲುತ್ತದೆ ಎಂದು ಸಂಚು ರೂಪಿಸಿ ಕೊಲೆಗೈದೆ’ ಎಂದು ಮುರಳಿಕೃಷ್ಣ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.