ADVERTISEMENT

ಸೌಲಭ್ಯ ಪಡೆಯಲು ಸಂಘಟಿತ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:30 IST
Last Updated 8 ಮಾರ್ಚ್ 2011, 18:30 IST
ಸೌಲಭ್ಯ ಪಡೆಯಲು ಸಂಘಟಿತ ಹೋರಾಟ ಅಗತ್ಯ
ಸೌಲಭ್ಯ ಪಡೆಯಲು ಸಂಘಟಿತ ಹೋರಾಟ ಅಗತ್ಯ   

ಬೆಂಗಳೂರು: ‘ಮಹಿಳೆಯರು ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಹೋರಾಟ ನಡೆಸಬೇಕು. ಈ ಹೋರಾಟಕ್ಕೆ ಎಲ್ಲರೂ ಸಹಕರಿಸಬೇಕು. ಏಕೆಂದರೆ ಇದರಿಂದ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅನುಕೂಲವಾಗುತ್ತದೆ’ ಎಂದು ಬರಹಗಾರ್ತಿ ಬಾನು ಮುಷ್ತಾಕ್ ಹೇಳಿದರು.ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು (ಎಐಎಂಎಸ್‌ಎಸ್) ಅಂತರರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾಗತೀಕರಣದ ತರುವಾಯ ಬಹಳಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಆದರೂ ಮಹಿಳೆಯರಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶಗಳು ಸಿಗುತ್ತಿಲ್ಲ. ಮಹಿಳೆಯರನ್ನು ಇಂದಿಗೂ ಮನೆ ಕೆಲಸಕ್ಕೆ ಸೀಮಿತಗೊಳಿಸುವುದು ನಡೆದೇ ಇದೆ. ಬೆಳಿಗ್ಗೆಯಿಂದ ಸಂಜೆವರೆಗೆ ಮನೆಯಲ್ಲಿ ದುಡಿದರೂ ಅದು ಅನುಪಯುಕ್ತವೆಂದೇ ಪುರುಷರು ಭಾವಿಸುತ್ತಾರೆ’ ಎಂದು ಅವರು ಹೇಳಿದರು.

‘ಮಹಿಳೆಯರಲ್ಲಿ ಇಂದಿಗೂ ಅಂಜಿಕೆ ಮನೋಭಾವ ತೀವ್ರವಾಗಿದೆ. ಅಂಜಿಕೆ ಮನೋಭಾವ ಬಿಟ್ಟು ತಮಗೆ ಸಿಗಬೇಕಾದ ಸ್ಥಾನಮಾನಗಳನ್ನು ಪಡೆಯಲು ಸಂಘಟಿತರಾಗಿ ಹೋರಾಟ ನಡೆಸಬೇಕು. ಈ ಹೋರಾಟಕ್ಕೆ ಪುರುಷರು ಬೆಂಬಲ ಸೂಚಿಸಬೇಕು. ಏಕೆಂದರೆ ಮಹಿಳೆಯರು ಸ್ವಾವಲಂಬಿತರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಎಐಎಂಎಸ್‌ಎಸ್ ಅಖಿಲ ಭಾರತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಜಿ. ಜಯಲಕ್ಷ್ಮಿ ಮಾತನಾಡಿ, ‘ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆಯೇ ಇಲ್ಲದಂತಾಗಿದೆ.ಶಾಲೆ- ಕಾಲೇಜು, ಕಚೇರಿಗಳಲ್ಲಿ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲ. ಅವಕಾಶ ಸಿಕ್ಕರೆ ಎಲ್ಲರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲು ಯತ್ನಿಸುತ್ತಾರೆ. ಇದರ ವಿರುದ್ಧ ಮಹಿಳೆಯರು ದನಿಯೆತ್ತಬೇಕಿದೆ’ ಎಂದು ಹೇಳಿದರು.

ಎಸ್‌ಯುಸಿಐ ಕೇಂದ್ರ ಸಮಿತಿ ಸದಸ್ಯ ಕೆ.ರಾಧಾಕೃಷ್ಣ ಮಾತನಾಡಿ, ‘ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಭ್ರೂಣ ಹತ್ಯೆ ಕೂಡ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಮಹಿಳೆಯರು ಈಗಲಾದರೂ ಸಂಘಟಿತರಾಗಿ ಹೋರಾಡಬೇಕು. ನುಡಿದಂತೆ ನಡೆಯುವ ಮುಖಂಡರ ನೇತೃತ್ವದಲ್ಲಿ ಚಳವಳಿ ನಡೆಸಬೇಕಿದೆ’ ಎಂದರು.ಎಐಎಂಎಸ್‌ಎಸ್ ರಾಜ್ಯ ಘಟಕದ ಅಧ್ಯಕ್ಷರಾದ ಡಾ.ಸುಧಾ ಕಾಮತ್, ಕಾರ್ಯದರ್ಶಿ ಬಿ.ಆರ್. ಅಪರ್ಣಾ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.