ADVERTISEMENT

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶ ಪ್ರಕ್ರಿಯೆ...

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸೇವಾನಿರತ ವೈದ್ಯರಿಗೆ ಇದೇ 9ರಂದು ಮರು ಕೌನ್ಸೆಲಿಂಗ್ ನಡೆಯಲಿದ್ದು, ಈ ಮೂಲಕ ಪ್ರಸಕ್ತ ವರ್ಷ ಮೂರು ಬಾರಿ ಕೌನ್ಸೆಲಿಂಗ್ ನಡೆದಂತಾಗಿದೆ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸೇವಾನಿರತ ವೈದ್ಯರಿಗೆ ಮೀಸಲಾದ 181 ಸೀಟುಗಳಿಗೆ ಕೌನ್ಸೆಲಿಂಗ್ ನಡೆಯಲಿದೆ. ಮರು ಕೌನ್ಸೆಲಿಂಗ್‌ನ ಸೀಟು ಹಂಚಿಕೆ ಪಟ್ಟಿ ಇನ್ನೂ ಪ್ರಕಟವಾಗಿಲ್ಲವಾದರೂ, ಮೊದಲಿನ ಹಾಗೆ ಒಟ್ಟು 181 ಸೀಟುಗಳು ಲಭ್ಯವಾಗುತ್ತವೆ ಎನ್ನಲಾಗಿದೆ.

ಹೈಕೋರ್ಟ್ ಆದೇಶದಂತೆ ಅರ್ಹರಲ್ಲದ 32 ಜನ ಸೇವಾನಿರತ ವೈದ್ಯರನ್ನು ಪಟ್ಟಿಯಿಂದ ಕೈಬಿಟ್ಟು ಮರು ಕೌನ್ಸೆಲಿಂಗ್ ನಡೆಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಕಳೆದ ಮೇ 31ರಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿತ್ತು.

ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ ಮೇ 31ರ ಒಳಗೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂಬ ಕಾರಣಕ್ಕಾಗಿ ವಿಶ್ವವಿದ್ಯಾಲಯ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಸರ್ಕಾರಕ್ಕೆ ಪತ್ರ ಬರೆದು ಸುಮ್ಮನಾಗಿತ್ತು.

ಈ ಮಧ್ಯೆ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯವು 32 ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಹೊಸದಾಗಿ ಕೌನ್ಸೆಲಿಂಗ್ ನಡೆಸುವಂತೆ ಸೂಚಿಸಿತ್ತು. ಹೀಗಾಗಿ ಕಳೆದ ಬಾರಿ ಸೀಟು ಆಯ್ಕೆ ಮಾಡಿಕೊಂಡಿದ್ದ 32 ಮಂದಿ ಈ ಬಾರಿ ಹೊರ ಬೀಳಲಿದ್ದು, ಆ ಸೀಟುಗಳು ಬೇರೆಯವರಿಗೆ ಲಭ್ಯವಾಗಲಿವೆ.

ಪ್ರಕರಣ ನ್ಯಾಯಾಲಯದಲ್ಲಿ ಇದ್ದ ಕಾರಣ ಕಳೆದ ಬಾರಿಯ ಕೌನ್ಸೆಲಿಂಗ್‌ನಲ್ಲಿ ಸೀಟು ಆಯ್ಕೆ ಮಾಡಿಕೊಂಡಿದ್ದ ಸೇವಾನಿರತ ವೈದ್ಯರನ್ನು ಸೇವೆಯಿಂದ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಅವರು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

ಮೂರು ತಿಂಗಳ ನಂತರ ಮೂರನೇ ಬಾರಿಗೆ ಮರು ಕೌನ್ಸೆಲಿಂಗ್ ನಡೆಯುತ್ತಿದ್ದು, ಈ ಬಾರಿಯಾದರೂ ಸುಸೂತ್ರವಾಗಿ ಕೌನ್ಸೆಲಿಂಗ್ ನಡೆದು ಅರ್ಹರಿಗೆ ಸೀಟುಗಳು ಲಭ್ಯವಾಗಬಹುದು ಎಂದು ಕೆಲ ಅಭ್ಯರ್ಥಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.