ADVERTISEMENT

ಸ್ನೇಹಿತನನ್ನು ಕೊಂದ ಸೋದರರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 17:30 IST
Last Updated 13 ಜನವರಿ 2012, 17:30 IST

ಬೆಂಗಳೂರು: ಸಹೋದರರಿಬ್ಬರು ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಹದೇವಪುರದ ಹೂಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಕೋಲಾರದ ಬಂಗಾರಪೇಟೆಯ ಮಂಜುನಾಥ್ (23) ಕೊಲೆಯಾದವರು. ಆರೋಪಿಗಳಾದ ಅರುಣ್ ಕುಮಾರ್ ಮತ್ತು ಸತೀಶ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂರೂ ಮಂದಿ ಬಂಗಾರಪೇಟೆಯವರು ಮತ್ತು ಸ್ನೇಹಿತರಾಗಿದ್ದರು.

ಸ್ಕೈಲಾರ್ ಎಂಬ ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರು ಹೂಡಿ ಬಳಿ ಕಟ್ಟಡವೊಂದರ ನಿರ್ಮಾಣಕ್ಕೆ ಅಡಿಪಾಯ ತೋಡುತ್ತಿದ್ದರು. ಭೂಮಿ ಅಗೆದ ನಂತರ ಮಣ್ಣನ್ನು ಮೂರೂ ಮಂದಿ ಸೇರಿ ಮಾರುತ್ತಿದ್ದರು. ಈ ವಿಷಯದಲ್ಲಿ ಅರುಣ್ ಮತ್ತು ಮಂಜುನಾಥ್ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಂಜೆ ಅವರಿಬ್ಬರು ಜಗಳ ಮಾಡಿಕೊಂಡಿದ್ದಾರೆ. ಮಂಜುನಾಥ್ ರಾತ್ರಿ ಊಟ ಮಾಡಲು ಹೋಗಿದ್ದ ವೇಳೆ ಆತನನ್ನು ಅರುಣ್ ಮತ್ತು ಸತೀಶ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಗಳವಾದಾಗ ಅರುಣ್ ಚಾಕುವಿನಿಂದ ಮಂಜುನಾಥ್ ಅವರ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಹದೇವಪುರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: ಬಂಧನ

ರಾಜಾಜಿನಗರದ ಐದನೇ ಬ್ಲಾಕ್‌ನಲ್ಲಿರುವ ಮನೆಯೊಂದರಲ್ಲಿ ಜೂಜಾಡುತ್ತಿದ್ದ ಹತ್ತು ಮಂದಿ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ರಾಮಚಂದ್ರಪುರದ ಶಿವ (32), ಸುರೇಶ್ (32), ಶ್ರೀರಾಮಪುರದ ಆರ್ಮುಗಂ (32), ಮಹದೇವ (33), ಚಾಮರಾಜಪೇಟೆಯ ಶೇಖರ್ (36), ಪ್ಯಾಲೇಸ್ ಗುಟ್ಟಹಳ್ಳಿಯ ರಮೇಶ್  (36), ಕಮಲಾನಗರದ ಶ್ರೀನಿವಾಸ  (24), ರಾಜಾಜಿನಗರದ ಮೂರನೇ ಬ್ಲಾಕ್‌ನ ಮನೋಜ್ (26), ಸಂತೋಷ್ (25) ಮತ್ತು ಡೇನಿಯಲ್ (26) ಬಂಧಿತರು. ಆರೋಪಿಗಳಿಂದ ಮೂರು ಲಕ್ಷ ರೂಪಾಯಿ, ಹತ್ತು ಮೊಬೈಲ್ ಫೋನ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಡಿಕ್ಕಿ: ಸಾವು

ಲಾರಿಯೊಂದು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕೆಂಗೇರಿ ಉಪನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಬಾಬೂಸಾಬ್‌ಪಾಳ್ಯದ ನಿವಾಸಿಯಾಗಿದ್ದ ರಾಮಕೃಷ್ಣ (46) ಮೃತಪಟ್ಟವರು.

ಸ್ವಂತ ವ್ಯಾಪಾರ ಮಾಡಿಕೊಂಡಿದ್ದ ಅವರು ರಾತ್ರಿ 10.45ರ ಸುಮಾರಿಗೆ ಕೆಂಗೇರಿ ಉಪನಗರದ ಕಾರ್ಪೋ ರೇಷನ್ ಬ್ಯಾಂಕ್ ಸಮೀಪ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಗಾಯಗಳಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.