ಬೆಂಗಳೂರು: ಸ್ವಯಂ ನಿವೃತ್ತಿ ಪಡೆದ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳಿಗೆ ನೀಡಬೇಕಿರುವ ಪಿಂಚಣಿ ಸೌಲಭ್ಯವನ್ನು ಕಡಿತಗೊಳಿಸುವ ಸಂಬಂಧದ ಉದ್ದೇಶಿತ ತಿದ್ದುಪಡಿಯನ್ನು ರದ್ದುಗೊಳಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಈ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್, ಕೆನರಾ ಹಾಗೂ ಎಸ್‌ಬಿಎಂ ಬ್ಯಾಂಕ್‌ಗಳ ಸಾವಿರಾರು ನೌಕರರಿಗೆ ಜಯ ದೊರೆತಿದೆ.
`ಬ್ಯಾಂಕ್ ನೌಕರರ ಪಿಂಚಣಿ ನಿಯಂತ್ರಣ ಕಾಯ್ದೆ~ಗೆ ತಿದ್ದುಪಡಿ ತರುವ ಸಂಬಂಧ 2000ನೇ ಸಾಲಿನ ಡಿ.15ರಂದು ಹೊರಡಿಸಲಾದ ಸುತ್ತೋಲೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ರದ್ದು ಮಾಡಿದೆ.
ಏನಿದು ತಿದ್ದುಪಡಿ: `ಬ್ಯಾಂಕ್ ಉದ್ಯೋಗಿಗಳು ಕನಿಷ್ಠ 15 ವರ್ಷಗಳ ಸೇವೆ ಸಲ್ಲಿಸಿದ್ದರೆ ಅಥವಾ ಅವರಿಗೆ 40 ವರ್ಷ ವಯಸ್ಸಾಗಿದ್ದರೆ ಅವರು ಸ್ವಯಂ ನಿವೃತ್ತಿ ಪಡೆಯಲು ಅರ್ಹರು. ಅವರು ಪಡೆಯುತ್ತಿದ್ದ ಎರಡು ತಿಂಗಳ ವೇತನದ ಮೊತ್ತವನ್ನು ಸ್ವಯಂ ನಿವೃತ್ತಿ ಪಡೆದ ತಕ್ಷಣ, ಒಟ್ಟಿಗೇ ಪಿಂಚಣಿ ರೂಪದಲ್ಲಿ ಅವರಿಗೆ ನೀಡಬೇಕು. ಅವರು ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಅನ್ವಯ ಆಗುವಂತೆ ಲೆಕ್ಕಾಚಾರ ಹಾಕಿ ಈ ಮೊತ್ತವನ್ನು ನೀಡಬೇಕು~ ಎನ್ನುವುದು ಬ್ಯಾಂಕ್ ನಿಯಮ.
ಈ ಅರ್ಜಿದಾರರೆಲ್ಲ 20 ವರ್ಷಗಳ ಸೇವೆ ಸಲ್ಲಿಸಿದ್ದರು. ಇವರಿಗೆಲ್ಲ 20 ವರ್ಷಗಳ ಒಟ್ಟಾರೆ ಮೊತ್ತ ಪಿಂಚಣಿ ರೂಪದಲ್ಲಿ ಬರಬೇಕಿತ್ತು. ಆದರೆ ಉದ್ದೇಶಿತ ತಿದ್ದುಪಡಿ ಅನ್ವಯ ಇವರು ಕೇವಲ 15 ವರ್ಷಗಳ ಪಿಂಚಣಿಗೆ ಮಾತ್ರ ಅರ್ಹರು.
ಉಳಿದ ಐದು ವರ್ಷಗಳ ಪಿಂಚಣಿಯಿಂದ ತಮ್ಮನ್ನು ಅನರ್ಹಗೊಳಿಸಿರುವುದು ಸರಿಯಲ್ಲ ಎಂದು ಅವರು ಏಕಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರು. ಅಲ್ಲಿ ನೌಕರರಿಗೆ ಜಯವಾಗಿತ್ತು.ಇದನ್ನು ಬ್ಯಾಂಕ್ ಈಗ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿ ಸೋತಿದೆ.
ಎಸ್‌ಬಿಎಂಗೆ ದಂಡ: ಉದ್ದೇಶಿತ ತಿದ್ದುಪಡಿಯ ಭಾಗವಾಗಿರದ ಎಸ್‌ಬಿಎಂ ಕೂಡ ಮೇಲ್ಮನವಿ ಸಲ್ಲಿಸಿದ್ದಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬ್ಯಾಂಕ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ, ನೌಕರರು ವಿನಾಕಾರಣ ಕೋರ್ಟ್ ಬಾಗಿಲಿಗೆ ಬರುವ ಹಾಗೆ ಆಯಿತೆಂದು ಪೀಠ ಅಭಿಪ್ರಾಯಪಟ್ಟಿದೆ. ಆದುದರಿಂದ ಪ್ರತಿವಾದಿಯಾಗಿರುವ ಎಸ್‌ಬಿಎಂನ ಒಟ್ಟು 129 ನೌಕರರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಪೀಠ ಬ್ಯಾಂಕ್‌ಗೆ ನಿರ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಪ್ಪಿಗೆ ಎಸ್‌ಬಿಎಂ ಒಟ್ಟೂ 1.29 ಲಕ್ಷ ರೂಪಾಯಿಗಳನ್ನು ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.